ಕಲಬುರಗಿ :ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಅಮೃತ್ ಭಾರತ್ ಸ್ಟೇಷನ್ ಯೋಜನೆಯಲ್ಲಿ ದೇಶದ 508 ರೈಲ್ವೆ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಂಡಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಅಡಿಗಲ್ಲು ಸಮಾರಂಭ ನೆರವೇರಿಸಿದ್ದಾರೆ. ಈ ಯೋಜನೆಯ ಪಟ್ಟಿಯಲ್ಲಿ ಸೊಲ್ಲಾಪುರ ರೈಲ್ವೆ ಡಿವಿಷನ್ ವ್ಯಾಪ್ತಿಯ ಕಲಬುರಗಿ, ಗಾಣಗಾಪುರ, ಶಾಹಬಾದ್ ಮತ್ತು ವಾಡಿ ಆಯ್ಕೆಯಾಗಿದೆ. ಕಲಬುರಗಿ ರೈಲ್ವೆ ನಿಲ್ದಾಣದಲ್ಲೂ ಅಡಿಗಲ್ಲು ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಲಬುರಗಿ ಸಂಸದ ಉಮೇಶ್ ಜಾಧವ್, ಶಾಸಕ ಅವಿನಾಶ್ ಜಾಧವ್, ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಶಶೀಲ್ ನಮೋಶಿ ಭಾಗಿಯಾಗಿದ್ದರು.
ಮೋದಿ ಅವರ ವರ್ಚುವಲ್ ಕಾರ್ಯಕ್ರಮದ ಬಳಿಕ ಸಂಸದ ಉಮೇಶ್ ಜಾಧವ್ ಆಯ್ಕೆಯಾಗಿರುವ ನಾಲ್ಕು ರೈಲ್ವೆ ಸ್ಟೇಷನ್ಗಳ ವಿಕಾಸಕ್ಕಾಗಿ ಅಡಿಗಲ್ಲು ಹಾಕಿದರು. ಸುಮಾರು ₹100 ಕೋಟಿ ವೆಚ್ಚದಲ್ಲಿ ಕಲಬುರಗಿ ಜಿಲ್ಲೆಯ ನಾಲ್ಕು ರೈಲ್ವೆ ನಿಲ್ದಾಣಗಳು ಮೇಲ್ದರ್ಜೆಗೇರಲಿವೆ. ನಿಲ್ದಾಣಗಳ ವಿಕಾಸ ಕಾರ್ಯಕ್ರಮದಲ್ಲಿ ಕಲಬುರಗಿಯ ನಾಗರಿಕರು ಭಾಗಿಯಾಗಿದ್ದರು.
ಉಮೇಶ ಜಾಧವ್ ಮಾತನಾಡಿ, "ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ದೇಶಾದ್ಯಂತ 1309 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಪ್ರಾರಂಭಿಸಲಾಗಿದೆ. ಯೋಜನೆಯ ಭಾಗವಾಗಿ 508 ನಿಲ್ದಾಣಗಳ ಪುನರಾಭಿವೃದ್ಧಿಗೆ ಇಂದು ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 24,470 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುವುದು. ನಗರದ ಎರಡೂ ಬದಿಗಳ ಸರಿಯಾದ ಏಕೀಕರಣದೊಂದಿಗೆ ನಿಲ್ದಾಣಗಳನ್ನು 'ನಗರ ಕೇಂದ್ರಗಳಾಗಿ' ಅಭಿವೃದ್ಧಿಪಡಿಸಲು ಮಾಸ್ಟರ್ ಪ್ಲಾನ್ಗಳನ್ನು ಸಿದ್ಧಪಡಿಸಲಾಗುತ್ತಿದೆ. ಸುಮಾರು ₹100 ಕೋಟಿ ವೆಚ್ಚದಲ್ಲಿ ಕಲಬುರಗಿ ಜಿಲ್ಲೆಯ ನಾಲ್ಕು ರೈಲ್ವೆ ನಿಲ್ದಾಣಗಳು ಮೇಲ್ದರ್ಜೆಗೆ ಏರಿಸಲಾಗುತ್ತಿದೆ".
"ಕಲಬುರಗಿ ಜಿಲ್ಲೆಯ ಜನರ ಬಹುದಿನಗಳ ರೈಲ್ವೆ ಡಿವಿಷನ್ ಬೇಡಿಕೆ ಕೂಡಾ ಶೀಘ್ರವೇ ಈಡೇರಲಿದೆ. ಈ ಬಗ್ಗೆ ರೈಲ್ವೆ ಸಚಿವರು ಹಾಗೂ ಪ್ರಧಾನ ಮಂತ್ರಿಗಳು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ" ಎಂದು ಹೇಳಿದರು.