ಕರ್ನಾಟಕ

karnataka

ETV Bharat / state

ಕಲಬುರಗಿ: ಮುಂಗಾರು ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ.. ಊರಿಗೆಲ್ಲಾ ಊಟ! - ಈಟಿವಿ ಭಾರತ್​ ಕರ್ನಾಟಕ

ಕಲಬುರಗಿ ತಾಲೂಕಿನ ಜಂಬಗಾ ಬಿ ಗ್ರಾಮಸ್ಥರು ಮಳೆಗಾಗಿ ಕಪ್ಪೆಗಳ ಮದುವೆ ಮಾಡಿದ್ದಾರೆ.

ಕಪ್ಪೆಗಳ ಮದುವೆ
ಕಪ್ಪೆಗಳ ಮದುವೆ

By

Published : Jun 27, 2023, 4:31 PM IST

Updated : Jun 27, 2023, 5:40 PM IST

ಮುಂಗಾರು ಮಳೆಗಾಗಿ ಕಪ್ಪೆಗಳ ಮದುವೆ ಮಾಡಿದ ಗ್ರಾಮಸ್ಥರು

ಕಲಬುರಗಿ :ಮಳೆಗಾಲ ಆರಂಭವಾಗಿ ತಿಂಗಳಾಗುತ್ತಿದ್ದರು ಸಹ ತೊಗರಿನಾಡು ಕಲಬುರಗಿ ಜಿಲ್ಲೆಯಲ್ಲಿ ವರುಣ ಕೃಪೆ ತೋರಿಲ್ಲ. ಮಳೆ ಬಾರದೆ ರೈತರು ಕೃಷಿ ಮಾಡಲಾಗದೆ ಸಂಕಷ್ಟಕ್ಕೆ ಸಿಲುಗಿದ್ದಾರೆ. ಆಕಾಶದತ್ತ ಮುಖ ಮಾಡಿರೋ ರೈತಾಪಿ ವರ್ಗ ಸಾಂಪ್ರದಾಯಿಕ ಆಚರಣೆಗೆ ಮುಂದಾಗಿದ್ದು, ಮಳೆಗಾಗಿ ಜಿಲ್ಲೆಯಲ್ಲಿ ರೈತರು ಕಪ್ಪೆಗಳ ಮದುವೆಯನ್ನು ಶಾಸ್ತ್ರೋಕ್ತವಾಗಿ ಮಾಡಿ ದೇವರಲ್ಲಿ ಮೊರೆ ಇಟ್ಟಿದ್ದಾರೆ‌.

ಕಲಬುರಗಿ ತಾಲ್ಲೂಕಿನ ಜಂಬಗಾ ಬಿ ಗ್ರಾಮಸ್ಥರು ಮಳೆಗಾಗಿ ಕಪ್ಪೆಗಳ ಮದುವೆ ನೆರವೇರಿಸಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ‌. ಗಂಡು ಮತ್ತು ಹೆಣ್ಣು ಕಪ್ಪೆಗಳ ಸಂಬಂಧಿಕರು ಹಾಗೂ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಕಪ್ಪೆಗಳಿಗೆ ಸ್ನಾನ ಮಾಡಿಸಿ, ಹೂಗಳಿಂದ ಸಿಂಗರಿಸಿ ಮನುಷ್ಯರ ಮದುವೆ ಮಾಡುವ ಹಾಗೆ ಕಪ್ಪೆಗಳ ಮದುವೆ ಮಾಡಿದ್ದಾರೆ. ಗ್ರಾಮದ ಮಹಿಳೆಯರು ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಗಂಡು- ಹೆಣ್ಣು ಕಪ್ಪೆಗಳಿಗೆ ಶಾಸ್ತ್ರೋಕ್ತವಾಗಿ ದೇವಸ್ಥಾನದಲ್ಲಿ ಮದುವೆ ಮಾಡಿ, ಹಾಡು ಹಾಡಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.

ಮದುವೆ ಬಳಿಕ ಗಂಡು ಮತ್ತು ಹೆಣ್ಣು ಕಪ್ಪೆಗಳ ಬೀಗರಿಗೆ ಸೀರೆ, ಬಟ್ಟೆ ಉಡುಗೊರೆ ನೀಡಿದ್ದಾರೆ. ಅಲ್ಲದೆ ಕಪ್ಪೆಗಳ ಮದುವೆಗಾಗಿಯೇ ಕಡಬು, ಬಜ್ಹಿ ಮಾಡಲಾಗಿದ್ದು, ಗ್ರಾಮಸ್ಥರೆಲ್ಲ ಕಪ್ಪೆಗಳ ಮದುವೆ ಬಳಿಕ ಮದುವೆ ಊಟ ಸವಿದಿದ್ದಾರೆ. ಜಂಬಗಾ ಬಿ ಗ್ರಾಮಸ್ಥರು ಮನುಷ್ಯರ ಮದುವೆ ಮಾಡುವ ರೀತಿಯಲ್ಲಿಯೇ ಕಪ್ಪೆಗಳ ಮದುವೆ ಮಾಡಿ ಹುಯ್ಯೋ ಹುಯ್ಯೋ ಮಳೆರಾಯ ಅಂತಾ ವರುಣ ದೇವನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಗ್ರಾಮಸ್ಥೆ ಕಲ್ಲಮ್ಮ ಮುಂಗಾರು ಕೃಷಿಗಾಗಿ ರೈತರು ಈಗಾಗಲೇ ಭೂಮಿ ಹದ ಮಾಡಿಕೊಂಡು 20 ರಿಂದ 30 ಸಾವಿರ ರೂ. ಗಳಿಗೆ ಬೀಜ, ಗೊಬ್ಬರ ಖರೀದಿ ಮಾಡುವ ಮೂಲಕ ಶೇಖರಣೆ ಮಾಡಿಟ್ಟುಕೊಂಡಿದ್ದಾರೆ. ಆದರೆ ಮಳೆ ಬಾರದೆ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದ್ದು, ಮಳೆಗಾಗಿ ಕಪ್ಪೆಗಳ ಮದುವೆ ಮಾಡಿದರೇ ಮಳೆ ಬರುತ್ತದೆ ಎಂದು ಗ್ರಾಮ ಮಹಿಳೆಯರೆಲ್ಲ ಸೇರಿ ಮದುವೆ ಮಾಡಿದ್ದೇವೆ ಎಂದು ಹೇಳಿದರು.

ಕಳೆದ ಎರಡು ದಿನಗಳ ಹಿಂದಷ್ಟೆ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಚಿಂಚೋಳಿ ಗ್ರಾಮಸ್ಥರು ಮಳೆಗಾಗಿ ಶಾಸ್ತ್ರೋಕ್ತವಾಗಿ ಕತ್ತೆಗಳ ಮದುವೆ ಮಾಡಿ ಭಾಗ್ಯವಂತಿ ದೇವರಲ್ಲಿ ಮೊರೆ ಇಟ್ಟಿದ್ದರು. ಇವತ್ತು ಜಂಬಗಾ ಗ್ರಾಮಸ್ಥರು ಮಳೆಗಾಗಿ ಕಪ್ಪೆಗಳ ಮದುವೆ ಮಾಡಿ ವರುಣ ದೇವನನ್ನು ಒಲಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಒಟ್ಟಿನಲ್ಲಿ ಮಳೆ ಇಲ್ಲದೆ ಜಿಲ್ಲೆಯಲ್ಲಿ ಬರಗಾಲದ ವಾತಾವರಣ ಸೃಷ್ಟಿಯಾಗಿದ್ದು, ಅದರಲ್ಲೂ ಅನ್ನದಾತರು ಅಕ್ಷರಶಃ ಕಂಗಾಲಾಗಿದ್ದಾರೆ.

ಬೀದರ್​ನಲ್ಲಿ ಗೊಂಬೆಗಳ ಮದುವೆ :ಬೀದರ್​ ಜಿಲ್ಲೆಯ ಹುಲಸೂರು ಪಟ್ಟಣದಲ್ಲಿ ಮಳೆಗಾಗಿ ಪ್ರಾರ್ಥಿಸಿ ಮೃಘ ನಕ್ಷತ್ರದಂದು ಮಹಿಳೆಯರೆಲ್ಲ ಸೇರಿ ಗೊಂಬೆಗಳ ಮದುವೆ ಮಾಡಿಸಿದ್ದಾರೆ. ಮಳೆರಾಯನ ಆಗಮನಕ್ಕಾಗಿ ಈ ರೀತಿ ಮಾಡುವುದರಿಂದ ಮಳೆಯಾಗುತ್ತದೆ ಎಂಬುದು ಜನರ ನಂಬಿಕೆಯಾಗಿದ್ದು, ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಮೊದಲಿಗೆ ಹಾಡುಗಳ ಮುಖಾಂತರ ಗೊಂಬೆಗೆ ಅರಿಶಿಣ, ಎಣ್ಣೆ ಹಚ್ಚಿ ಸ್ನಾನ ಮಾಡಿಸಿ ಪಟ್ಟಣದ ಆರಾಧ್ಯದೈವ ಶ್ರೀ ವೀರಭದ್ರೇಶ್ವರ ದೇವಸ್ಥಾಕ್ಕೆ ಗೊಂಬೆಗಳನ್ನು ಕರೆದೊಯ್ದು ದರ್ಶನ ಪಡೆಯಲಾಯಿತು. ಬಳಿಕ ಮಂಟಪಕ್ಕೆ ಕರೆತಂದು ಅವುಗಳನ್ನು ಅಲಂಕರಿಸಿ ಅಕ್ಷತೆಯ ಹಾಡು ಮುಖಾಂತರ ಎರಡು ಗೊಂಬೆಗಳ ಪರ ಮಹಿಳೆಯರು, ಬೀಗರು, ನೆಂಟರ ಸಮ್ಮುಖದಲ್ಲಿ ಮದುವೆ ಮಾಡಲಾಗಿದೆ.

ಇದನ್ನೂ ಓದಿ :ಕೈಕೊಟ್ಟ ಮಳೆ: ಗೊಂಬೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ ಜನ

Last Updated : Jun 27, 2023, 5:40 PM IST

ABOUT THE AUTHOR

...view details