ಕಲಬುರಗಿ:ಕಲಬುರಗಿ - ಕೊಲ್ಹಾಪುರ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಇಂದು ಹಸಿರು ನಿಶಾನೆ ತೋರಿಸಲಾಯಿತು. ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕಲಬುರಗಿ ಮತ್ತು ಕೊಲ್ಹಾಪುರ ಮಾರ್ಗದ ರೈಲು ಸಂಚಾರಕ್ಕೆ ಚಾಲನೆ ನೀಡಿದರು.
ಈವರೆಗೆ ಸೊಲ್ಹಾಪುರ ಮೀರಜ್ ನಡುವೆ ಮಾತ್ರ ಸಂಚಾರ ನಡೆಸುತ್ತಿದ್ದ ಎಕ್ಸ್‌ಪ್ರೆಸ್ ರೈಲನ್ನು ಕೊಲ್ಹಾಪುರದ ವರೆಗೂ ವಿಸ್ತರಣೆ ಮಾಡಲಾಗಿದೆ. ಕಲಬುರಗಿ ಕೊಲ್ಹಾಪುರ ರೈಲು ಸಂಚಾರಕ್ಕೆ ಜನರು ಹೆಚ್ಚಿನ ಬೇಡಿಕೆ ಇಟ್ಟಿದ್ದರು. ಸಂಸದ ಉಮೇಶ್ ಜಾಧವ್ ಕೇಂದ್ರ ಸರ್ಕಾರಕ್ಕೆ ಈ ಕುರಿತಂತೆ ಮನವಿ ಮಾಡಿದ್ದರು.
ರೈಲು ಸಂಚಾರದ ಸಮಯ:ಕಲಬುರಗಿ - ಕೊಲ್ಹಾಪುರ ನಡುವೆ ರೈಲು ಸಂಚರಿಸಲಿದೆ. ಕಲಬುರಗಿ ನಗರದಿಂದ ಪ್ರತಿದಿನ ಬೆಳಗ್ಗೆ 6.40ಕ್ಕೆ ಪ್ರಯಾಣ ಆರಂಭಿಸಲಿದೆ. ಮಧ್ಯಾಹ್ನ 2.15ಕ್ಕೆ ಕೊಲ್ಹಾಪುರಕ್ಕೆ ತಲುಪಲಿದೆ. ಕೊಲ್ಹಾಪುರದಿಂದ ಮಧ್ಯಾಹ್ನ 3 ಗಂಟೆಗೆ ಹೊರಡಲಿದ್ದು, ರಾತ್ರಿ 10.45ಕ್ಕೆ ಕಲಬುರಗಿ ತಲುಪಲಿದೆ.
ರೈಲು ಮಾರ್ಗ ವಿಸ್ತರಣೆಯಿಂದ ಗಾಣಗಾಪುರದ ದತ್ತಾತ್ರೇಯ, ಪಂಡರಾಪುರದ ವಿಠ್ಠಲ, ಕೊಲ್ಹಾಪುರದ ಮಹಾಲಕ್ಷ್ಮಿ ದೇವಾಲಯಗಳಿಗೆ ತೆರಳುವ ಭಕ್ತರಿಗೆ ಸಹಾಯಕವಾಗಲಿದೆ. ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸುವ ನೇರ ರೈಲಿಗೆ ಬೇಡಿಕೆ ಇಟ್ಟಿದ್ದ ಜನರಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಕಲಬುರಗಿಯಿಂದ ಹೊರಡುವ ರೈಲು 7.05ಕ್ಕೆ ಗಾಣಗಾಪುರ, 7.46ಕ್ಕೆ ಅಕ್ಕಲಕೋಟ, 9.30ಕ್ಕೆ ಕುರುಡ್ವಾಡಿ, 10.20ಕ್ಕೆ ಪಂಡರಾಪುರ, 12.45 ಮೀರಜ್, 1.10ಕ್ಕೆ ಜೈಸಿಂಗ್‌ಪುರ, 1.25ಕ್ಕೆ ಹತ್ಕಣಂಗಲೆ ಮೂಲಕ ಕೊಲ್ಹಾಪುರ ತಲುಪಲಿದೆ.
(ಇದನ್ನೂ ಓದಿ: 180 ಕಿಮೀ ವೇಗ ತಲುಪಿದ ವಂದೇ ಭಾರತ್ ಎಕ್ಸ್‌ಪ್ರೆಸ್... ಆರು ಪ್ರಯೋಗಗಳು ಯಶಸ್ವಿ)