ಕಲಬುರಗಿ: "ನಿರ್ಮಲಾ ಸೀತಾರಾಮನ್ ಅವರಿಂದು ಮಂಡಿಸಿದ ಬಜೆಟ್ ಫ್ಲಾಪ್ ಆಗಿದೆ. ಇತ್ತ ಚುನಾವಣೆ ಬಜೆಟ್ಟೂ ಅಲ್ಲ, ಅತ್ತ ಜನಸಾಮಾನ್ಯರ ಬಜೆಟ್ಟೂ ಅಲ್ಲ. ಹಳೆಯ ಬಜೆಟ್ ಅನ್ನೇ ಪುನರಾವರ್ತನೆ ಮಾಡಿದ್ದಾರೆ" ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದರು.
ಎಂಟು ವರ್ಷದಿಂದ ಬಿಜೆಪಿಯವರು ಏನೂ ಹೇಳಿದ್ದರೋ ಅದನ್ನೇ ಈ ಬಾರಿಯೂ ಹೇಳಿದ್ದಾರೆ. 2ನೇ ಬಾರಿ ಕರ್ನಾಟಕದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಕೊಟ್ಟಿದ್ದೇನು?, ಕರ್ನಾಟಕದ ಋಣ ತೀರಿಸುವ ಕೆಲಸ ಕೂಡಾ ಅವರು ಮಾಡಿಲ್ಲ ಎಂದರು.
ಬಜೆಟ್‌ನಲ್ಲಿ ಬಡತನ ರೇಖೆಯಿಂದ ಕೆಳಗಿರುವ ಜನರನ್ನೂ ಮೇಲಕ್ಕೆ ತರಲು ಯಾವ ಯೋಜನೆಯನ್ನೂ ರೂಪಿಸಿಲ್ಲ. ದೇಶದ ಆರ್ಥಿಕ ವ್ಯವಸ್ಥೆ (ಜಿಡಿಪಿ) ಕುಸಿತ ಕಾಣುತ್ತಿದೆ. ದೇಶದಲ್ಲಿ ಗಳಿಕೆಯಿಲ್ಲದೇ ಜನರ ಆದಾಯ ಕಡಿಮೆ ಆಗಿದೆ. ಅನೇಕರಿಗೆ ಆದಾಯವೇ ಇಲ್ಲ. ಹೀಗಿರುವಾಗ ಇನ್ಕಮ್ ಟ್ಯಾಕ್ಸ್ ವಿನಾಯತಿ ಹೆಚ್ಚಿಸಿದ್ದಾರೆ ಎಂದು ದೂರಿದರು.
75 ವರ್ಷದಲ್ಲಿ ಇಲ್ಲದ ನಿರುದ್ಯೋಗ ಸಮಸ್ಯೆ ಈಗ ಸೃಷ್ಟಿಯಾಗಿದೆ. ಉದ್ಯೋಗ ಸೃಷ್ಟಿಗೆ ಇವರು ಏನು ಮಾಡ್ತಿದ್ದಾರೆ ಹೇಳ್ತಿಲ್ಲ. ಅವರೇ ಹೇಳಿದ ಹಾಗೆ ಇಲ್ಲಿವರೆಗೆ ದೇಶದಲ್ಲಿ ನೂರಾರು ಸ್ಮಾರ್ಟ್ ಸಿಟಿಗಳು ತಲೆ ಎತ್ತಬೇಕಿತ್ತು. ಒಂದೇ ಒಂದು ಸ್ಮಾರ್ಟ್ ಸಿಟಿಯಾದ್ರೂ ತೋರಿಸಲಿ ಬಿಜೆಪಿಯವರು. ಬರೀ ಘೋಷಣೆ ಮಾಡುವ ಮೂಲಕ ಸರ್ಕಾರ ತಮ್ಮಷ್ಟಕ್ಕೆ ತಾವೇ ಬೆನ್ನು ಚಪ್ಪರಿಸಿಕೊಳ್ಳುವ ಸರ್ಕಾರವಾಗಿದೆ ಎಂದು ಟೀಕಿಸದರು.