ಕಲಬುರಗಿ :ಸನಾತನ ಧರ್ಮದ ಬಗ್ಗೆ ತುಚ್ಚವಾಗಿ ಮಾತಾಡಿರೋ ಉದಯನಿಧಿ ಸ್ಟಾಲಿನ್ ಮತ್ತು ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕೆಂದು ಕಲಬುರಗಿ ಸಂಸದ ಉಮೇಶ್ ಜಾಧವ್ ಆಗ್ರಹಿಸಿದ್ದಾರೆ.
ಈ ಕುರಿತು ಕಲಬುರಗಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸನಾತನ ಧರ್ಮದ ಬಗ್ಗೆ ಉದಯನಿಧಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಕೆಂಡಾಮಂಡಲರಾದರು. ಸನಾತನ ಧರ್ಮ, ಡೆಂಘಿ, ಮಲೇರಿಯಾ ಇದ್ದಹಾಗೆ, ಇದನ್ನ ಬೇರು ಸಮೇತ ಕಿತ್ತೊಗೆಯಬೇಕು ಎಂದು ಹೇಳುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ. ಒಬ್ಬ ಸಿಎಂ ಮಗನಾಗಿರುವ ಉದಯನಿಧಿ ಈ ರೀತಿ ಆಘಾತಕಾರಿ ಹೇಳಿಕೆ ಕೊಟ್ಟಿದ್ದಾರೆ. ಸಂವಿಧಾನದ ವಿರುದ್ದ ಮಾತಾಡಿದ್ದಾರೆ. ಇದರಿಂದ ದೇಶದಲ್ಲಿ ಗೊಂದಲದ ಸ್ಥಿತಿ ನಿರ್ಮಾಣಗೊಂಡಿದೆ. ಅವರ ಹೇಳಿಕೆ ನಮಗೆಲ್ಲ ತುಂಬಾ ನೋವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಿಯಾಂಕ್ ಖರ್ಗೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ : ಇದೇ ವೇಳೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ ಖರ್ಗೆ ಅವರು ಉದಯನಿಧಿ ಅವರ ಹೇಳಿಕೆಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಬೇರೆ ಬೇರೆ ಪಕ್ಷದವರು ಇಂಡಿಯಾ ಘಟಬಂಧನದವರು ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುವ ಮೂಲಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇಡೀ ಜಗತ್ತಿಗೆ ವೇದ ಕೊಟ್ಟಿದ್ದು ಸನಾತನ ಧರ್ಮ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಧರ್ಮ ಸನಾತನ ಧರ್ಮವಾಗಿದೆ. ಹೀಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಜೊತೆಗೆ ಈ ಇಬ್ಬರು ಮಂತ್ರಿಗಳನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.