ಕಲಬುರಗಿ: ತಾಲೂಕಿನ ದಸ್ತಾಪುರ ಗ್ರಾಮಸ್ಥರಿಗೆ ಜೀವಜಲವೇ ವಿಷವಾಗಿ ಪರಿಣಮಿಸಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಕಲುಷಿತ ನೀರು ಸೇವಿಸಿ ದಸ್ತಾಪುರ ಗ್ರಾಮದಲ್ಲಿ 40 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು, ಹಾಸಿಗೆ ಹಿಡಿದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಗ್ರಾಮಸ್ಥರು ಕಲುಷಿತ ನೀರು ಸೇವಿಸಿ ವಾಂತಿ-ಭೇದಿಯಿಂದ ಬಳಲುತ್ತಿದ್ದು ಹಾಸಿಗೆ ಹಿಡಿದಿದ್ದಾರೆ. ಕಲುಷಿತ ನೀರು ಕುಡಿದು ಮಕ್ಕಳು ಸೇರಿ ಗ್ರಾಮದಲ್ಲಿ 40ಕ್ಕೂ ಹೆಚ್ಚು ಜನ ತೀವ್ರ ಅಸ್ವಸ್ಥಗೊಂಡು ಕಲಬುರಗಿಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ದ್ರೌಪತಿ ಮತ್ತು ಕಮಲಾಬಾಯಿ ಎಂಬಿಬ್ಬರು ಮಹಿಳೆಯರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ದಸ್ತಾಪುರ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನೀಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ನೀರಿನ ಸ್ಯಾಂಪಲ್ ಪಡೆದು ಟೆಸ್ಟ್‌ಗೆ ಕಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.