ಕಲಬುರಗಿ: ವಿಚಾರಣೆ ನೆಪದಲ್ಲಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಆರೋಪದಡಿ ಇಬ್ಬರು ಪಿಎಸ್ಐಗಳನ್ನು ಸೇವೆಯಿಂದ ಅಮಾನತುಗೊಳಿಸಿ ಎಸ್ಪಿ ಮರಿಯಂ ಜಾರ್ಜ್ ಆದೇಶಿಸಿದ್ದಾರೆ.
ಚಿಂಚೋಳಿ ಪಿಎಸ್ಐ ರಾಜಶೇಖರ ರಾಠೋಡ ಹಾಗೂ ಸುಲೇಪೇಟ್ ಪಿಎಸ್ಐ ಚೇತನ ಬಿದರಿ ಅವರನ್ನು ಅಮಾನತುಗೊಳಿಸಲಾಗಿದ್ದು, ಇವರ ಮೇಲಿರುವ ಆರೋಪ ಕುರಿತು ತನಿಖೆಗಾಗಿ ಡಿವೈಎಸ್ಪಿ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಗಿದೆ.
ಘಟನೆ ವಿವರ:
ನಕಲಿ ಬಿಲ್ ತಯಾರಿಸಿ ಚೆಕ್ ನೀಡುವಂತೆ ಪುರಸಭೆ ಸದಸ್ಯ ಆನಂದ ಟೈಗರ್ ಎಂಬಾತ ನನ್ನ ಮೇಲೆ ಹಲ್ಲೆ ಮಾಡಿದ್ದಾನೆಂದು ಪುರಸಭೆ ಮುಖ್ಯಾಧಿಕಾರಿ ಅಭಯ್ ಕುಮಾರ್ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ನಂತರ ಆನಂದ ಟೈಗರ್ ನಾಪತ್ತೆಯಾಗಿದ್ದು, ಆತನ ಪರಿಚಯಸ್ಥ ಯುವಕನನ್ನು ಠಾಣೆಗೆ ಕರೆತಂದು ವಿಚಾರಣೆ ನೆಪದಲ್ಲಿ ಪೊಲೀಸರು ಥಳಿಸಿದ್ದಾರೆಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದರು.
ಮೇಲ್ನೋಟಕ್ಕೆ ಥಳಿಸಿದ್ದು ದೃಢಪಟ್ಟ ಹಿನ್ನೆಲೆ ಡಿವೈಎಸ್ಪಿ ನೇತೃತ್ವದ ತಂಡದಿಂದ ತನಿಖೆ ನಡೆಸಲಾಗುತ್ತಿದೆ. ತನಿಖೆ ವೇಳೆ ಪಿಎಸ್ಐಗಳು ಅಧಿಕಾರದಲ್ಲಿದ್ದರೆ ಅಧಿಕಾರದ ಪ್ರಭಾವ ಬೀರಬಹುದೆಂಬ ಕಾರಣಕ್ಕೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿರುವುದಾಗಿ ತಿಳಿದು ಬಂದಿದೆ.