ಕಲಬುರಗಿ: ಜಿಲ್ಲೆಯಲ್ಲಿ 80 ವರ್ಷದ ಹಿರಿಯ ಜೀವಿಗಳಿಬ್ಬರು ಮಹಾಮಾರಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು ಅವರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.
ನಗರದ ಸರಫ್ ಬಜಾರ್ (ಪುಟಾಣಿ ಗಲ್ಲಿ) ಪ್ರದೇಶದ 80 ವರ್ಷದ ವೃದ್ಧೆ (P-983) ಹಾಗೂ ಅಫಜಲಪೂರ ತಾಲೂಕಿನ ಅಳಗಿ (ಬಿ) ಗ್ರಾಮದ 80 ವರ್ಷದ ವೃದ್ಧ (P-1039) ಕೊರೊನಾ ವಿರುದ್ಧ ಹೋರಾಡಿ ಗುಣಮುಖರಾದವರು.
ಇದರಿಂದ ಕೊರೊನಾ ಪೀಡಿತ 185 ಜನರಲ್ಲಿ 75 ಜನ ಗುಣಮುಖರಾಗಿದ್ದಾರೆ. 7 ಜನ ನಿಧನ ಹೊಂದಿದ್ದು, 103 ಜನರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ವಿವರಿಸಿದರು.
75 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಸೋಂಕು ತಗುಲಿದರೆ ಗುಣಮುಖರಾಗುವುದು ಕಠಿಣ ಎಂಬ ಭೀತಿ ನಡುವೆ 80 ವರ್ಷದ ಹಿರಿಯ ಎರಡು ಜೀವಿಗಳು ಕೊರೊನಾ ವಿರುದ್ಧ ಹೋರಾಡಿ ಗುಣಮುಖರಾಗಿರುವುದಕ್ಕೆ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.