ಕಲಬುರಗಿ:ನ್ಯಾಯವಾದಿ ಈರಣ್ಣಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ನೀಲಕಂಠರಾವ್ ಪಾಟೀಲ್ ಹಾಗೂ ಇವರ ಪತ್ನಿ ಸಿದ್ದಮ್ಮ ಪಾಟೀಲ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 7 ರಂದು ಕಲಬುರಗಿ ನಗರದ ಗಂಗಾವಿಹಾರ ಅಪಾರ್ಟ್ಮೆಂಟ್ನಲ್ಲಿ ನ್ಯಾಯವಾದಿ ಈರಣ್ಣಗೌಡ ಪಾಟೀಲ್ ಅವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹತ್ಯೆಯ ನಾಲ್ಕೈದು ದಿನದ ಹಿಂದೆ ಕೊಲೆಗೆ ಪ್ಲಾನ್ ಮಾಡಿ ಎಲ್ಲಾ ವ್ಯವಸ್ಥೆ ಮಾಡಿದ್ರು ಎಂಬ ಆರೋಪ ಗಂಡ-ಹೆಂಡತಿ ಮೇಲಿದೆ. ಅಲ್ಲದೆ ಈರಣ್ಣಗೌಡ ಹತ್ಯೆಯಾದ ಬಳಿಕ ಆರೋಪಿ ಮಲ್ಲಿನಾಥ್ ನಾಯ್ಕೋಡಿಗೆ, ಸಿದ್ದಮ್ಮ 50 ಸಾವಿರ ಹಣ ಕೊಟ್ಟಿದ್ರು. ಕೊಲೆಯ ನಂತರ ಆರೋಪಿ ಮಲ್ಲಿನಾಥ್ ನಾಯ್ಕೋಡಿ ರಕ್ತದ ಕಲೆಯಲ್ಲಿಯೇ ಸಿದ್ದಮ್ಮ ಮನೆಗೆ ಬಂದು ಹಣ ತೆಗೆದುಕೊಂಡು ಹೋಗಿದ್ದನೆಂದು ತನಿಖೆಯಲ್ಲಿ ಬಯಲಾಗಿದೆ.
ಬಂಧಿತ ನೀಲಕಂಠ ಪಾಟೀಲ್ ಹಾಗೂ ಕೊಲೆಯಾದ ನ್ಯಾಯವಾದಿ ಈರಣ್ಣಗೌಡ ಪಾಟೀಲ್ ಸಹೋದರ ಸಂಬಂಧಿಯಾಗಿದ್ದಾರೆ. ಕಲಬುರಗಿ ನಗರಕ್ಕೆ ಹೊಂದಿಕೊಂಡಂತೆ ಎಕರೆಗೆ 3ಕೋಟಿ ರೂ. ಬೆಲೆ ಬಾಳುವ 12 ಎಕರೆ ಜಮೀನು ಈರಣ್ಣಗೌಡ ಪಾಟೀಲ್ ಅವರ ಹೆಸರಿನಲ್ಲಿ ಇತ್ತು. ಈ ಜಮೀನನ್ನು ಆರೋಪಿ ಮಲ್ಲಿನಾಥ ನಾಯ್ಕೋಡಿ ಕುಟುಂಬದವರು ನೋಡಿಕೊಳ್ಳುತ್ತಿದ್ದರು. ಈ ನಡುವೆ ಸೈಟ್ ಹಾಕಿ ಮಾರಾಟ ಮಾಡಿದ್ರೆ ಒಂದೊಂದು 30x40 ಸೈಜ್ ಸೈಟ್‌ಗೆ ಕನಿಷ್ಠ ಅಂದ್ರೂ 20 ರಿಂದ 30 ಲಕ್ಷ ರೂ. ಬೆಲೆ ಬಾಳುತ್ತದೆ. ಹೀಗಾಗಿ ತಮ್ಮ ಜಮೀನಿಗೆ ನಾನ್ ಅಗ್ರಿಕಲ್ಚರ್ (ಎನ್ಎ), ಜಿಡಿಎ ಮಾಡಿಸಿ ಸೈಟ್ ಆಗಿ ಪರಿವರ್ತನೆ ಮಾಡಲು ಈರಣ್ಣಗೌಡ ಪಾಟೀಲ್ ಯೋಜಿಸಿದ್ದರು. ಆದ್ರೆ ಜಮೀನಿನಲ್ಲಿ ಪಾಲು ಬೇಕು ಎಂದು ನೀಲಕಂಠ ಪಾಟೀಲ್ ಹಾಗೂ ನಾಯ್ಕೋಡಿ ಕುಟುಂಬದವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.