ಕಲಬುರಗಿ:ಬೈಕ್ ಮತ್ತು ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟಿರುವ ದಾರುಣ ಘಟನೆ ಚಿತ್ತಾಪುರ ತಾಲೂಕಿನ ಸಾತನೂರ ಬಳಿ ನಡೆದಿದೆ. ಮೃತ ಬೈಕ್ ಸವಾರರು ದಿಗ್ಗಾಂವ ಗ್ರಾಮದ ಮರೆಪ್ಪ (54) ಹಾಗೂ ಭಾಗಣ್ಣಾ (35) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ತೀವ್ರ ರಕ್ತಸ್ರಾವದಿಂದ ಇಬ್ಬರು ದುರ್ಮರಣ ಹೊಂದಿದ್ದಾರೆ.
ಸ್ಥಳಕ್ಕೆ ಸಿಪಿಐ ಪ್ರಕಾಶ್ ಯಾತನೂರ, ಚಿತ್ತಾಪುರ ಪಿಎಸ್ಐ ಶ್ರೀಶೈಲ ಅಂಬಾಟಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಶಿವಯ್ಯಾ, ಮುಕ್ತುಂ ಪಟೇಲ್, ಹುಸೇನ್ ಪಾಷಾ, ಬಸು ರೆಡ್ಡಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್‌ಗೆ ಕಾರು ಡಿಕ್ಕಿ- ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿ ಕಾರ್ ಸಮೇತ ಪರಾರಿಯಾದ ಚಾಲಕ: ಓವರ್‌ಟೇಕ್ ಮಾಡಲು ಹೋಗಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದನು. ಅಪಘಾತ ಮಾಡಿದ ಕಾರು ಚಾಲಕ ಬೈಕ್ ಸವಾರನನ್ನು ತನ್ನ ಕಾರಿನಲ್ಲಿ ಕರೆತಂದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಕಾರು ಸಮೇತ ಪರಾರಿಯಾಗಿದ್ದಾನೆ. ಈ ಘಟನೆ ಕಲಬುರಗಿ ನಗರದ ಹಾಗರಗಾ ಕ್ರಾಸ್ ಬಳಿ ನಡೆದಿದ್ದು, ಅಜರ್ ಅಲಿ ಎಂಬ ಬೈಕ್ ಸವಾರನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.