ಕಲಬುರಗಿ:ಎರಡು ಕೊರೊನಾ ಸೋಂಕಿತ ರೋಗಿಗಳು ಮಾಡಿದ ಎಡವಟ್ಟಿನಿಂದಾಗಿ ಜಯದೇವ ಹೃದ್ರೋಗ ಸಂಸ್ಥೆಯ 21 ಸಿಬ್ಬಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಜಯದೇವ ಸಂಸ್ಥೆಯ 21 ಜನ ಸಿಬ್ಬಂದಿ ಪೈಕಿ ಐವರು ವೈದ್ಯರಿದ್ದು, ಉಳಿದಂತೆ ಇತರೆ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಸೇಡಂನಿಂದ ಬಂದಿದ್ದ ವ್ಯಕ್ತಿಯೋರ್ವ ಇಲ್ಲಿನ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದ, ಬಳಿಕ ಅದೇ ಆಸ್ಪತ್ರೆಯಲ್ಲಿ ವ್ಯಕ್ತಿಯ ಗಂಟಲ ದ್ರವ ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು. ನಂತರ ಯಾವುದೇ ಮಾಹಿತಿ ನೀಡದೆ ನೇರವಾಗಿ ಜಯದೇವ ಆಸ್ಪತ್ರೆಗೆ ಬಂದು ದಾಖಲಾಗಿ ಆ್ಯಂಜಿಯೋಗ್ರಾಂ ಶಸ್ತ್ರಚಿಕಿತ್ಸೆ ಪಡೆದುಕೊಂಡಿದ್ದ. ನಂತರ ವ್ಯಕ್ತಿಯ ವರದಿ ಕೊರೊನಾ ಪಾಸಿಟಿವ್ ಬಂದಿರುವುದು ವೈದ್ಯ ಸಿಬ್ಬಂದಿಗೆ ತಿಳಿದು ಕಂಗಾಲಾಗಿದ್ದರು.
ಈ ವೇಳೆ 31 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಆಸ್ಪತ್ರೆಯನ್ನು ಒಂದು ದಿನ ಬಂದ್ ಮಾಡಿ ಸಂಪೂರ್ಣ ಸ್ಯಾನಿಟೈಸ್ ಮಾಡಿದ ನಂತರ ಪುನರಾರಂಭಿಸಲಾಗಿತ್ತು. ನಂತರ ಮತ್ತೋರ್ವ ರೋಗಿ ಜಯದೇವ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದ, ಆತನಿಗೆ ಚಿಕಿತ್ಸೆ ನೀಡಿದ್ದ ವೈದ್ಯರು, ಆತನ ಗಂಟಲ ದ್ರವವನ್ನು ಲ್ಯಾಬ್‌ಗೆ ಕಳುಹಿಸಿಕೊಟ್ಟಿದ್ದರು. ಆತನಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಆತನಿಗೆ ಚಿಕಿತ್ಸೆ ನೀಡಿದ್ದ ವೈದ್ಯರು, ಇತರೆ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು.
ಇದೀಗ ಚಿಕಿತ್ಸೆ ನೀಡಿದ ವೈದ್ಯರು, ಸಿಬ್ಬಂದಿಯ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಬರೋಬ್ಬರಿ 21 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮತ್ತಷ್ಟು ಸಿಬ್ಬಂದಿಗೆ ಸೋಂಕು ದೃಢಪಡುವ ಸಾಧ್ಯತೆಗಳಿವೆ ಎಂದು ಜಯದೇವ ಸಂಸ್ಥೆ ಹೇಳಿದೆ.
ಸದ್ಯ ಕಲಬುರಗಿ ಜಯದೇವ ಹೃದ್ರೋಗ ಸಂಸ್ಥೆಯನ್ನು ಸೀಲ್ಡೌನ್ ಮಾಡಲಾಗಿದೆ. ಒಟ್ಟಿನಲ್ಲಿ ರೋಗಿಗಳಿಬ್ಬರು ಮಾಡಿದ ಅಚಾತುರ್ಯದಿಂದ ಇಡೀ ಆಸ್ಪತ್ರೆ ಸಿಬ್ಬಂದಿಯೇ ತೊಂದರೆಗೆ ಒಳಗಾಗುವಂತಾಗಿದೆ.