ಕಲಬುರಗಿ: ಆಳಂದ ಪಟ್ಟಣದ ಪ್ರಾರ್ಥನಾ ಸ್ಥಳವೊಂದರಲ್ಲಿ ತಲವಾರ್ ಝಳಪಿಸಿ, ಕಲ್ಲು ಬಡಿಗೆಗೆಗಳಿಂದ ಹಲ್ಲೆ ಮಾಡಿದ ದುಷ್ಕರ್ಮಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲ್ಲು ತೂರಾಟದಲ್ಲಿ ಕೇಂದ್ರ ಸಚಿವ ಭಗವಂತ ಖುಬಾ, ಕಲಬುರಗಿ ಜಿಲ್ಲೆಯ ಕೆಲ ಬಿಜೆಪಿ ಶಾಸಕರ ಕಾರುಗಳು ಜಖಂಗೊಂಡಿದ್ದವು. ಅಷ್ಟೇ ಅಲ್ಲದೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಮತ್ತು ಎಸ್ ಪಿ ಇಶಾ ಪಂತ್ ಕಾರು ಕೂಡ ಡ್ಯಾಮೇಜ್ ಆಗಿತ್ತು. ಕಲ್ಲು ತೂರಾಟ ಆಗುತ್ತಿದ್ದಂತೆ ಲಾಠಿ ಚಾರ್ಜ್ ಮಾಡಿ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ಬಳಿಕ ಹಲ್ಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆಳಂದ ಪೊಲೀಸ್ ಠಾಣೆಯಲ್ಲಿ ಐದು ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.
167 ಜನರ ಬಂಧನ..ಐದು ಎಫ್ಐಆರ್ ಸಂಬಂಧ ಫೀಲ್ಡಿಗಿಳಿದ ಪೊಲೀಸರು ಸುಮಾರು 167 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 10 ಜನ ಮಹಿಳೆಯರು ಕೂಡ ಇದ್ದಾರೆ.
ಪೂರ್ವನಿಯೋಜಿತ ಕೃತ್ಯ..ಆಳಂದ ಪಟ್ಟಣದಲ್ಲಿ ಇಂದು ಕೂಡ ಪೊಲೀಸ್ ಬಿಗಿ ಭದ್ರತೆಯನ್ನ ನಿಯೋಜನೆ ಮಾಡಿ ಶಾಂತಿ ಸುವ್ಯವಸ್ಥೆ ಕಾಪಾಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದ ಹಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕಲ್ಲು ತೂರಾಟ ಮತ್ತು ಗಲಾಟೆ ಪೂರ್ವನಿಯೋಜಿತ ಕೃತ್ಯದ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಗುಪ್ತಚರ ಇಲಾಖೆ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ವಿವಾದಿತ ಸ್ಥಳದ ಅಕ್ಕ ಪಕ್ಕದ ಮನೆ ಮೇಲೆ ಜಮಾವಣೆಗೊಂಡ ಕಲ್ಲು ಬಂಡಿಗೆಗಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯ ಹಿಂದೆ ಯಾರಿದ್ದಾರೆ ಅನ್ನೋದರ ಬಗ್ಗೆ ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.