ಕಲಬುರಗಿ:ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿ, ಅಪ್ರಾಪ್ತೆ ಮೇಲೆ ಇಬ್ಬರು ಬಾಲಕರು ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಇಬ್ಬರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂತ್ರಸ್ತ ಬಾಲಕಿ ಕುಟುಂಬಸ್ಥರು ದುಡಿಯಲು ಮುಂಬೈಗೆ ತೆರಳಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಹತ್ತು ವರ್ಷದ ಬಾಲಕಿ ಸಂಬಂಧಿಕರ ಮನೆಯಲ್ಲಿ ಇದ್ದಳು. ಹೀಗಿರುವಾಗ 14 ಮತ್ತು 16 ವರ್ಷದ ಇಬ್ಬರು ಬಾಲಕರು ಸೋಮವಾರ ಬಾಲಕಿಗೆ ಮಾರಕಾಸ್ತ್ರ ತೋರಿಸಿ, ಬೆದರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರ ಮಾಡಿರುವ ದೃಶ್ಯ ತಮ್ಮ ಮೊಬೈಲ್ನಲ್ಲಿ ವಿಡಿಯೋ ಕೂಡಾ ಮಾಡಿದ್ದಾರೆ. ಅಲ್ಲದೆ, ಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ವಿಡಿಯೋ ಹರಿಬಿಡುವುದಲ್ಲದೆ, ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಾಲಕರ ದುಷ್ಕೃತ್ಯದ ಬಗ್ಗೆ ಕುಟುಂಬಸ್ಥರ ಮುಂದೆ ಬಾಲಕಿ ಹೇಳಿದ್ದಾಳೆ. ಬಳಿಕ ಆಕೆಯ ತಂದೆ ಮಂಗಳವಾರ ಕಾಳಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಈಗಾಗಲೇ ಇಬ್ಬರೂ ಬಾಲಕರನ್ನು ವಶಕ್ಕೆ ಪಡೆದು ಜಿಲ್ಲಾ ಬಾಲ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಪ್ರತ್ಯೇಕ ಅಪಘಾತ, ಇಬ್ಬರು ಸಾವು:ತಾಜ್ ಸುಲ್ತಾನಪುರ ರಿಂಗ್ ರಸ್ತೆ ಮತ್ತು ಹುಮನಾಬಾದ್ ರಸ್ತೆಯ ಆಲಗೂಡ್ ಕ್ರಾಸ್ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ. ಮೈಮೇಲೆ ಲಾರಿ ಹರಿದು ಆಶ್ರಯ ಕಾಲೋನಿಯ ನಿವಾಸಿ ಅಂಬರೀಶ ಅಣವೀರಪ್ಪ ಪಡಶೆಟ್ಟಿ (43) ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇವರು ಕುಸನೂರ ರಸ್ತೆಯ ಗಾಂಧಿ ಬಜಾರ್ನಲ್ಲಿ ಕೆಲಸ ಮಾಡುತ್ತಿದ್ದರು.
ರಾತ್ರಿ 11ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಬೈಕ್ ಮೇಲೆ ಮನೆಯ ಕಡೆಗೆ ಹೊರಟಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಅವರು ನೆಲಕ್ಕೆ ಉರುಳಿದ ಬಿದ್ದಿದ್ದಾರೆ, ಅವರ ಮೇಲೆ ಹಿಂದೆ ಬರುತ್ತಿದ್ದ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಎರಡು ಕಾರುಗಳ ನಡುವೆ ಡಿಕ್ಕಿ:ಮತ್ತೊಂದಡೆ, ಹುಮನಾಬಾದ್ ರಸ್ತೆಯ ಆಲಗೂಡ್ ಕ್ರಾಸ್ ಹತ್ತಿರ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಶಹಾಬಾದ ಪಟ್ಟಣದ ಮಕ್ತೂಮ್ (52) ಎಂಬವರು ಮೃತಪಟ್ಟಿದ್ದಾರೆ. ಇವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ರೌಫ್, ಬಸವರಾಜ, ಮಲ್ಲಿಕಾರ್ಜುನ ಮತ್ತು ಇನ್ನೊಂದು ಕಾರಿನಲ್ಲಿದ್ದ ಕೋಹಿನೂರ ಗ್ರಾಮದ ಸಂಜೀವಕುಮಾರ ಎಂಬವರು ಗಾಯಗೊಂಡಿದ್ದಾರೆ. ಮೃತ ಮಕ್ತೂಮ್ ಹಾಗೂ ಆತನ ಸಹಚರರು ಕಾರಿನಲ್ಲಿ ಹುಮನಾಬಾದ್ಗೆ ಹೋಗಿ ಮರಳಿ ಬರುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಸಂಜೀವಕುಮಾರ ಅವರಿದ್ದ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದಿದೆ. ಸಂಚಾರಿ ಪೊಲೀಸ್ ಠಾಣೆ 1ರಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಈ ಕುರಿತು ತನಿಖೆ ನಡೆದಿದೆ.
ಇದನ್ನೂ ಓದಿ:ಮುಂಬೈನಲ್ಲಿ 64 ವರ್ಷದ ವಿಧವೆ ಮೇಲೆ ಮೂವರಿಂದ ಸಾಮೂಹಿಕ ಅತ್ಯಾಚಾರ