ಕರ್ನಾಟಕ

karnataka

ETV Bharat / state

ಈಜಲು ಹೋದ ಇಬ್ಬರು ಬಾಲಕರು ಭೀಮಾ ನದಿ‌ಯಲ್ಲಿ ಮುಳುಗಿ ಸಾವು - ಜೆಸ್ಕಾಂ ಶಾಖಾಧಿಕಾರಿ ತಲೆದಂಡ

ಭೀಮಾ ನದಿಯಲ್ಲಿ ಈಜಲು‌ ಹೋದ‌ ಇಬ್ಬರು ಬಾಲಕರು ಮುಳುಗಿ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಕೋನಹಿಪ್ಪರಗಾ ಗ್ರಾಮದಲ್ಲಿ ಜರುಗಿದೆ.

Two boys died while going swimming
ಈಜಲು ಹೋದ ಬಾಲಕರಿಬ್ಬರು ಭೀಮಾ ನದಿ‌ಯಲ್ಲಿ ಮುಳುಗಿ ಸಾವು

By

Published : Jul 1, 2023, 10:43 PM IST

ಕಲಬುರಗಿ: ಈಜಲು‌ ಹೋದ‌ ಬಾಲಕರಿಬ್ಬರು ಭೀಮಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ‌ ಘಟನೆ ಜೇವರ್ಗಿ ತಾಲೂಕಿನ ಕೋನಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ. ಶನಿವಾರ ಮಧ್ಯಾಹ್ನದ ಹೊತ್ತಿಗೆ ಗ್ರಾಮದ ಹೊರವಲಯದಲ್ಲಿರುವ ಭೀಮಾ ನದಿಗೆ ಈಜಲು ಬಾಲಕರಿಬ್ಬರು ತೆರಳಿದ್ದರು. ಆದರೆ ಕಾಲು ಜಾರಿ ಓರ್ವ ನೀರು ಪಾಲಾಗುವಾಗ ಇನ್ನೋರ್ವನನ್ನು ರಕ್ಷಣೆಗೆ ಇಳಿದಿದ್ದ. ಆತನೂ ಕೂಡ ಮೃತಪಟ್ಟಿದ್ದಾನೆ.

ದೇವಿಂದ್ರ ಹೊಸಮನಿ (17) ಹಾಗೂ ರಾಮು ದೊಡ್ಡಮನಿ(13) ಮೃತ ದುರ್ದೈವಿಗಳು. ನೀರಲ್ಲಿ‌ ಮುಳುಗಿ ಸಾವನ್ನಪ್ಪಿದ ವಿಷಯವನ್ನು ಗ್ರಾಮಸ್ಥರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗ್ರಾಮಸ್ಥರ ಸಹಾಯದಿಂದ ಮೃತ ದೇಹಗಳನ್ನು‌ ನೀರಿನಿಂದ ಹೊರಗೆ‌ ತೆಗೆದಿದ್ದಾರೆ. ಮೃತ ದೇಹಗಳನ್ನು ಹೊರ ತರುತ್ತಿದ್ದಂತೆ ಬಾಲಕರು ಕುಟುಂಬಸ್ಥರ ಅಕ್ರಂದನ‌ ಮುಗಿಲು ಮುಟ್ಟಿತ್ತು. ಗ್ರಾಮಸ್ಥರು ಕಂಬನಿ ಮಿಡಿದರು. ಈ‌ ಕುರಿತು ಜೇವರ್ಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೈನ್​ ಮ್ಯಾನ್ ಸಾವು, ಜೆಸ್ಕಾಂ ಶಾಖಾಧಿಕಾರಿ ತಲೆದಂಡ:ವಿದ್ಯುತ್ ತಂತಿ ಸ್ಪರ್ಶಿಸಿ ಲೈನ್​ ಮ್ಯಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಅಫಜಲಪುರ ತಾಲೂಕಿನ ಬಟಗೇರಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಜೇವರ್ಗಿ ತಾಲೂಕಿನ ಹುಲ್ಲೂರು ಗ್ರಾಮದ ಸಂತೋಷ ಗುಜ್ಜಾ(29) ಮೃತ ದುರ್ದೈವಿ. ಇವರು ಚವಡಾಪುರ ಜೆಸ್ಕಾಂ ಉಪ ವಿಭಾಗದ ವ್ಯಾಪ್ತಿಗೆ ಒಳಪಡುವ ಬಟಗೇರಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಟಿಸಿ ಕಂಬದಲ್ಲಿ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದುರ್ಘಟನೆ ನಡೆದ ತಕ್ಷಣ ಸ್ಥಳೀಯ ರೈತರು ಹಾಗೂ ಸಾರ್ವಜನಿಕರು ಚವಡಾಪುರ ರಾಜ್ಯ ಹೆದ್ದಾರಿ ತಡೆದು ಟೈರ್​ಗೆ ಬೆಂಕಿ ಹಚ್ಚಿ ಸುಮಾರು 3 ಗಂಟೆಗೂ ಅಧಿಕ ಕಾಲ ಪ್ರತಿಭಟಿಸಿದರು.

ಇದನ್ನೂ ಓದಿ:ವಿಜಯಪುರ: ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋದ ತಾಯಿ, ಇಬ್ಬರು ಮಕ್ಕಳು ಸಾವು

''ಲೈನ್​ ಮ್ಯಾನ್ ವಿದ್ಯುತ್ ಕಂಬ ಹತ್ತುವ ಮೊದಲು ಸ್ಥಳೀಯ ಕಚೇರಿಗೆ ಮಾಹಿತಿ ನೀಡಿ ಟಿಸಿ ರಿಪೇರಿ ಮಾಡುವ ಹಿನ್ನೆಲೆ, ಅರ್ಧ ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳಿಸಿ ಎಂದು ಹೇಳಲಾಗಿತ್ತು. ಲೈನ್​ ಮ್ಯಾನ್​ ವಿದ್ಯುತ್ ಕಂಬ ಏರಿದ ಮೇಲೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಇದರಿಂದ ಲೈನ್ ಮ್ಯಾನ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಹೀನ ಕೃತ್ಯದಲ್ಲಿ ಯಾರದ್ದೋ ಕೈವಾಡವಿದೆ. ಕೊಲೆ ಮಾಡುವ ಉದ್ದೇಶದಿಂದಲೇ ಅನುಮತಿ ಪಡೆಯದೇ ವಿದ್ಯುತ್ ಸಂಪರ್ಕ ನೀಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಸೂಕ್ತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಕುಟುಂಬಸ್ಥರಿಗೆ ಸರ್ಕಾರದಿಂದ 1 ಕೋಟಿ ರೂ. ಪರಿಹಾರ ನೀಡಬೇಕು'' ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಜನರ ಆಕ್ರೋಶದ ಹಿನ್ನೆಲೆ ಚವಡಾಪುರ ಜೆಸ್ಕಾಂ ಶಾಖಾಧಿಕಾರಿ ಚಂದ್ರಶೇಖರ ಬರಡಿ ಅವರನ್ನು ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಅಮಾನತ್​ ಮಾಡಿ ಆದೇಶ ಹೊರಡಿಸಲಾಗಿದ್ದು, ಚವಡಾಪುರ ಶಾಖೆಗೆ ತಾತ್ಕಾಲಿಕವಾಗಿ ಗೊಬ್ಬೂರ ಶಾಖಾಧಿಕಾರಿ ಸತ್ಯನಾರಾಯಣ ಅವರನ್ನು ಮುಂದಿನ ಆದೇಶದವರೆಗೆ ಹೆಚ್ಚುವರಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ.

ಇದನ್ನೂ ಓದಿ:ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಐವರು ನೀರು ಪಾಲು

ABOUT THE AUTHOR

...view details