ಕಲಬುರಗಿ:ಶಿರೋಳ ಗ್ರಾಮದ ಬಿಜೆಪಿ ಕಾರ್ಯಕರ್ತ ಶಿವಕುಮಾರ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಮೃತನ ಮಡದಿ ಹೊಸ ತಿರುವು ನೀಡಿದ್ದಾರೆ. ''ತನ್ನ ಪತಿ ಶಿವಕುಮಾರನ ಸಾವನ್ನು ರೈತ ಆತ್ಮಹತ್ಯೆ'' ಎಂದು ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ''ಪತಿ ಶಿವಕುಮಾರ ಪೂಜಾರಿ 12 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಸಾಲದ ಚಿಂತೆಯಲ್ಲಿ ಮದ್ಯ ಸೇವಿಸುತ್ತಿದ್ದರು. ಮಳೆಯಾಗದ ಹಿನ್ನೆಲೆ ಹೆಸರು ಬೆಳೆ ಸಂಪೂರ್ಣ ಹಾಳಾಗಿತ್ತು. ಸಾಲ ತೀರಿಸುವುದು ಹೇಗೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಆತ್ಮಹತ್ಯೆ ಪ್ರಕರಣದಲ್ಲಿ ಯಾರ ಮೇಲೆಯೂ ಸಂಶಯವಿಲ್ಲವೆಂದು'' ಮೃತ ಶಿವಕುಮಾರನ ಪತ್ನಿ ಮಲ್ಲಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಚಿವ ಶರಣಪ್ರಕಾಶ ಪಾಟೀಲ್ ಪ್ರತಿಕ್ರಿಯೆ:ಶುಕ್ರವಾರ ಕಲಬುರಗಿ ನಗರಕ್ಕೆ ಆಗಮಿಸಿದ ಸಚಿವ ಶರಣಪ್ರಕಾಶ ಪಾಟೀಲ್ ಅವರು, ''ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರು ಅನ್ನೋದೆ ಗೊತ್ತಿಲ್ಲ. ಬಿಜೆಪಿ ಮುಖಂಡರು ಸೋಲಿನ ಹತಾಶಯದಿಂದ ಸಲ್ಲದ ಆರೋಪ ಮಾಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆಗ ಆತ್ಮಹತ್ಯೆಗೆ ಕಾರಣ ಏನು? ಆ ಆಡಿಯೋ ಎಲ್ಲಿಂದ ಬಂದಿದೆ ಎನ್ನೊದು ಪತ್ತೆಯಾಗಲಿದೆ'' ಎಂದು ತಿಳಿಸಿದ್ದಾರೆ.
ಶರಣಪ್ರಕಾಶ ಪಾಟೀಲ್ ರಾಜೀನಾಮೆ ನೀಡುವ ಅಗತ್ಯವಿಲ್ಲ- ಪ್ರಿಯಾಂಕ್ ಖರ್ಗೆ:ಸಚಿವ ಪ್ರಿಯಾಂಕ್ ಖರ್ಗೆ ಕೂಡಾ ಶರಣಪ್ರಕಾಶ ಪಾಟೀಲ ಬೆನ್ನಿಗೆ ನಿಂತಿದ್ದಾರೆ. ನಗರದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ''ಮೃತನ ಕುಟುಂಬಸ್ಥರು ಸಾಲ ಮಾಡಿಕೊಂಡ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿಯವರು ಆ ಕುಟುಂಬಸ್ಥರನ್ನು ಮೀರಿ ಮಾತನಾಡುತ್ತಿದ್ದಾರೆ. ಪ್ರಕರಣ ಈಗಾಗಲೇ ಸಿಐಡಿ ತನಿಖೆಗೆ ನೀಡಲಾಗಿದೆ. ಶರಣಪ್ರಕಾಶ ಪಾಟೀಲ್ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ'' ಎಂದು ಹೇಳಿದ್ದಾರೆ.