ಕಲಬುರಗಿ :ಮಹಾನಗರ ಪಾಲಿಕೆ ಚುನಾವಣೆಗೆ ನಾಳೆ ಮತ ಎಣಿಕೆ ನಡೆಯಲಿದೆ. 55 ವಾರ್ಡ್‌ಗಳಿಗೆ ಸ್ಪರ್ಧಿಸಿದ 300 ಅಭ್ಯರ್ಥಿಗಳ ಭವಿಷ್ಯ ನಾಳೆ ಹೊರ ಬೀಳಲಿದೆ. ಮತ ಎಣಿಕೆಗೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಗರದ ನೂತನ ವಿದ್ಯಾಲಯ ಅಂತಾರಾಷ್ಟ್ರೀಯ ಶಾಲೆಯಲ್ಲಿ ಕೌಂಟಿಂಗ್ ಪ್ರಕ್ರಿಯೆ ನಡೆಯಲಿದೆ. ನಾಳೆ ಬೆಳಗ್ಗೆ 7:45ಕ್ಕೆ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಗುತ್ತದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ಮತ ಎಣಿಕೆಗಾಗಿ 11 ಕೌಂಟಿಂಗ್ ಹಾಲ್ ಸಿದ್ಧಪಡಿಸಲಾಗಿದೆ.
ನಾಳೆ ಪಾಲಿಕೆ ಚುನಾವಣೆ ಮತ ಎಣಿಕೆ ಒಂದೊಂದು ಕೌಂಟಿಂಗ್ ಹಾಲ್ಗೆ ಓರ್ವ ಆರ್ ಒ ನೇಮಕ ಮಾಡಲಾಗಿದೆ. ಪ್ರತಿ ಮತ ಎಣಿಕೆ ಹಾಲ್ನಲ್ಲಿ 5 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. ಒಂದೊಂದು ಕೌಂಟಿಂಗ್ ಹಾಲ್ನಲ್ಲಿ 5 ವಾರ್ಡ್ ಗಳ ಮತ ಎಣಿಕೆ ನಡೆಯುತ್ತದೆ. ಮತ ಎಣಿಕೆ ಕಾರ್ಯಕ್ಕೆ 55 ತಂಡಗಳನ್ನ ನಿಯೋಜಿಸಲಾಗಿದೆ.
ಒಟ್ಟು 55 ಚುನಾವಣಾಧಿಕಾರಿ ಹಾಗೂ 55 ಜನ ಎಣಿಕೆ ಸಹಾಯಕರು ಇರಲಿದ್ದಾರೆ. ಮತ ಎಣಿಕೆ ಕಾರ್ಯಕ್ಕೆ ಒಟ್ಟು 110 ಸಿಬ್ಬಂದಿ ನೇಮಕ ಮಾಡಿರುವುದಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ ವಿ ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.
ನಿಷೇಧಾಜ್ಞೆ ಜಾರಿ : ಮತ ಎಣಿಕೆ ಹಿನ್ನೆಲೆ ಇಂದು ಸಂಜೆ 6 ರಿಂದ ನಾಳೆ ರಾತ್ರಿ 12ರವರೆಗೆ ಮಧ್ಯ ಮಾರಾಟ ನಿಷೇಧ ಮಾಡಲಾಗಿದೆ. ಕೌಂಟಿಂಗ್ ಕೇಂದ್ರದಿಂದ 100 ಮೀಟರ್ ಅಂತರದಲ್ಲಿ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ವಿಜಯೋತ್ಸವಕ್ಕೆ ನಿರ್ಬಂಧ ತರಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಸ್ಯಾನಿಟೈಸೇಷನ್ ಮಾಡುವುದರ ಜೊತೆಗೆ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಕೌಂಟಿಂಗ್ ನಡೆಸಲು ಸಿದ್ಧತೆ ನಡೆಸಲಾಗಿದೆ.
ಪೊಲೀಸ್ ಸರ್ಪಗಾವಲು: ಮತ ಎಣಿಕೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. 170 ಪೊಲೀಸ್ ಸಿಬ್ಬಂದಿ, 100 ಹೋಂ ಗಾರ್ಡ್ಗಳನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ವಿಜಯ ವಿ ಜೋತ್ಸ್ನಾ, ಡಿಸಿಪಿ ಅಡೂರ್ ಶ್ರೀನಿವಾಸುಲು, ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ : ಈ ವರ್ಷ 5 ಸಾವಿರ ಶಿಕ್ಷಕರ ನೇಮಕಾತಿ: ಶಿಕ್ಷಕರ ದಿನದಂದು ಸಿಎಂ ಸಿಹಿಸುದ್ದಿ