ಕಲಬುರಗಿ: ನಾಲ್ಕು ದಶಕಗಳಿಂದ ಲೋಹದ ಹಕ್ಕಿಯ ಹಾರಾಟದ ಕನಸು ಕಂಡಿದ್ದ ಕಲ್ಯಾಣ ಕರ್ನಾಟಕ ಜನತೆಯ ಆಸೆ ಕಡೆಗೂ ಈಡೇರುವ ಸಂದರ್ಭ ಬಂದಿದೆ. ನಾಳೆ (ನ.22) ಕಲಬುರಗಿ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ಆರಂಭವಾಗಲಿದೆ.
ಕಲಬುರಗಿ ವಿಮಾನ ನಿಲ್ದಾಣದಿಂದ ನಾಗರಿಕ ವಿಮಾನ ಹಾರಾಟ ಆರಂಭ ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಗ್ರಾಮದ ಬಳಿ ವಿಶಾಲವಾದ 742 ಎಕರೆ ಭೂಮಿಯಲ್ಲಿ 175 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. 2007 ರಲ್ಲಿ ಕಲಬುರಗಿಗೆ ವಿಮಾನ ನಿಲ್ದಾಣ ಕಾಮಗಾರಿ ಮಂಜೂರಾಗಿತ್ತು. 2008 ಜೂ.14ರಂದು ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ಅಡಿಗಲ್ಲು ನೆರವೇರಿಸಿದ್ದರು. ಆರಂಭದಲ್ಲಿ ಕಾಮಗಾರಿ ಗುತ್ತಿಗೆ ಪಡೆದಿದ್ದ ರಾಹಿ ಸಂಸ್ಥೆ 2011ರಲ್ಲಿ ಕಾಮಗಾರಿ ಪೂರ್ಣಗೊಳ್ಳಿಸಬೇಕಿತ್ತು. ಆದರೆ, ಸಂಸ್ಥೆಯ ಆಂತರಿಕ ಜಗಳದಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಬಳಿಕ ರಾಜ್ಯ ಸರಕಾರ ಲೋಕೋಪಯೋಗಿ ಇಲಾಖೆಯಿಂದ ಯೋಜನೆ ಪೂರ್ಣಗೊಳಿಸಿದೆ.
ರಾಜ್ಯದ 2ನೇ ಅತಿ ಉದ್ದದ ರನ್‌ವೇ ಇದಾಗಿದೆ. 3.25 ಕಿ.ಮೀ. ಉದ್ದದ ರನ್ ವೇ ನಿರ್ಮಾಣವಾಗಿದೆ. ಟರ್ಮಿನಲ್ ಬಿಲ್ಡಿಂಗ್, ಏರ್ ಟ್ರಾಫಿಕ್ ಕಂಟ್ರೋಲ್ ಬಿಲ್ಡಿಂಗ್, ಕ್ರ್ಯಾಶ್ ಫೈರ್ ರೆಸ್ಕ್ಯೂ ಬಿಲ್ಡಿಂಗ್, ಒಳಗೊಂಡಂತೆ ಪ್ರತಿಯೊಂದು ಕಾಮಗಾರಿಗಳು ಅಚ್ಚುಕಟ್ಟಾಗಿ ನಿರ್ಮಾಣವಾಗಿವೆ. ಈಗಾಗಲೇ 2018 ಆ.26 ರಂದು ಹೈದರಾಬಾದ್ ಮೂಲದ ಟ್ರೈನಿಂಗ್ ಕಂಪನಿಗೆ ಸೇರಿದ ಡೈಮಂಡ್-40 ಮತ್ತು ಡೈಮಂಡ್-42 ಎಂಬ 4 ಆಸನವುಳ್ಳ ಎರಡು ಲಘು ವಿಮಾನಗಳು ಬಂದಿಳಿಯುವ ಮೂಲಕ ಪರೀಕ್ಷಾರ್ಥ ವಿಮಾನ ಹಾರಾಟ ಯಶಸ್ವಿಯಾಗಿ ನಡೆದಿದೆ.
ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾಕ್ಕೆ ಹಸ್ತಾಂತರಿದಲಾಗಿದೆ.
ಕಲಬುರಗಿಗೆ GBI ಕೋಡ್ ಪಡೆದು ವಿಮಾನಯಾನ ಆರಂಭಿಸಲಾಗಿದೆ. ಪ್ರಾರಂಭಿಕ ಹಂತದಲ್ಲಿ ಸ್ಟಾರ್ ಏರ್ ಸಂಸ್ಥೆ ನಾಳೆ ಶುಭಾರಂಭ ಮಾಡಲಿದ್ದು, ಬೆಂಗಳೂರಿನಿಂದ ಕಲಬುರಗಿಗೆ ವಿಮಾನಯಾನ ನಡೆಯಲಿದೆ.
ಬೆಂಗಳೂರಿನಿಂದ ಮಧ್ಯಾಹ್ನ 12.20ಕ್ಕೆ ಹೊರಟು 1.25 ಕ್ಕೆ ಕಲಬುರಗಿ ನಿಲ್ದಾಣಕ್ಕೆ ಬಂದಿಳಿಯಲಿದೆ. ಇದೇ ವಿಮಾನದಲ್ಲಿ ಆಗಮಿಸಲಿರುವ ಸಿಎಂ ಯಡಿಯೂರಪ್ಪ, ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮಧ್ಯಾಹ್ನ 1.55 ಕ್ಕೆ ಹೊರಟು 3 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದಾರೆ. ಉದ್ಘಾಟನಾ ಸಮಾರಂಭಕ್ಕೆ ಸಕಲ ಸಿದ್ಧತೆ ನಡೆದಿದೆ.