ಕಲಬುರಗಿ: ಇಂದಿನಿಂದ ಪ್ರಾರಂಭವಾಗುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಶ್ರೀ ವಿಜಯ ಸಮ್ಮೇಳನದ ಪ್ರಧಾನ ವೇದಿಕೆಯಾಗಿದೆ. ಪ್ರಥಮ ದಿನವಾದ ಇಂದು ಬೆಳಗ್ಗೆ 8 ಗಂಟೆಗೆ ವಿಶ್ವವಿದ್ಯಾಲಯ ಆವರಣದಲ್ಲಿರುವ ಸಮ್ಮೇಳನದ ವೇದಿಕೆಯಲ್ಲಿ ರಾಷ್ಟ್ರಧ್ವಜಾರೋಹಣ ನಡೆಯಲಿದೆ. ಡಿಸಿಎಂ ಗೋವಿಂದ ಕಾರಜೋಳ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.
ಅಖಿಲ ಭಾರತ 85 ನೇ ಕನ್ನಡ ಸಾಹಿತ್ಯ ಸಮ್ಮೇಳನ ಬೆಳಗ್ಗೆ 8:30ಕ್ಕೆ ಸಮ್ಮೇಳನಾಧ್ಯಕ್ಷ ಎಚ್ ಎಸ್ ವೆಂಕಟೇಶಮೂರ್ತಿ ಭವ್ಯ ಮೆರವಣಿಗೆ ನಗರದ ರಂಗಮಂದಿರದಿಂದ ಸಮ್ಮೇಳನ ನಡೆಯುವ ವಿವಿ ಆವರಣದವರೆಗೂ ಸಾಗಲಿದೆ. ಡಿಸಿ ಶರತ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ 11:30 ಕ್ಕೆ ಸಿಎಂ ಬಿಎಸ್ವೈ ಸಮ್ಮೇಳನದ ಉದ್ಘಾಟನೆ ನೆರವೇರಿಸಲಿದ್ದಾರೆ. ಕಲ್ಯಾಣ ಕರ್ನಾಟಕ ಅಂದು - ಇಂದು- ಮುಂದು ಹಾಗೂ ಸಾಯಂಕಾಲ ಸಮಕಾಲಿನ ಸಾಹಿತ್ಯ- ಚಹರೆ ಮತ್ತು ಸವಾಲುಗಳು ಕುರಿತ ಗೋಷ್ಠಿಗಳು ನಡೆಯಲಿವೆ.
ಎರಡನೇ ದಿನವಾದ ಗುರುವಾರ ಬೆಳಗ್ಗೆ 9:45 -11:30ರ ವರೆಗೆ ಸ್ತ್ರೀ ಲೋಕ- ತಲ್ಲಣಗಳು, ಬೆಳಗ್ಗೆ 11:30 ರಿಂದ 12:14 ರವರೆಗೆ ವಿಶೇಷ ಉಪನ್ಯಾಸ, ಕನ್ನಡ ಉಳಿಸಿ ಬೆಳೆಸುವ ಬಗೆ, ದಲಿತ ಬಂಡಾಯ- ಸ್ಥಿತ್ಯಂತರ ನೆಲೆಗಳ ಕುರಿತಾಗಿ ಗೋಷ್ಠಿಗಳು ನಡೆಯಲಿವೆ.
ಶುಕ್ರವಾರ ಚಲನಚಿತ್ರ- ಕನ್ನಡ ಸಾಹಿತ್ಯ. ಮಾಧ್ಯಮ - ಸವಾಲುಗಳ ಕುರಿತಾಗಿ ಗೋಷ್ಠಿಗಳು ಇರಲಿವೆ, ಕಸಾಪ ಅಧ್ಯಕ್ಷ ಮನು ಬಳಿಗಾರ ಇದರ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಯಂಕಾಲ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಗೌರವ ಅತಿಥಿಗಳಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಭಾಗವಹಿಸಲಿದ್ದರೆ, ಡಾ: ಗೀತಾ ನಾಗಭೂಷಣ ಸಮಾರೋಪ ಭಾಷಣ ಮಾಡಲಿದ್ದಾರೆ.