ಕಲಬುರಗಿ:ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಹಾಲಿ ಶಾಸಕರಿಗೆ ಟಿಕೆಟ್ ಕಟ್ ಆಗುವ ಸಾಧ್ಯತೆ ಬಗ್ಗೆ ಮಾಜಿ ಸಿಎಂ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸುಳಿವು ನೀಡಿದ್ದಾರೆ. ಕಲಬುರಗಿಯ ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ಹಾಲಿ ನಾಲ್ಕಾರು ಶಾಸಕರಿಗೆ ಟಿಕೆಟ್ ಕೈ ತಪ್ಪಬಹುದು, ಇನ್ನುಳಿದ ಹಾಲಿ ಶಾಸಕರಿಗೆ ಟಿಕೆಟ್ ಸಿಗುವ ಸಂಭವ ಹೆಚ್ಚಿದೆ ಎಂದು ಹೇಳಿದ್ದಾರೆ.
ಇದೇ ವೇಳೆ, ರಾಜ್ಯಾದ್ಯಂತ 140ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಎಲ್ಲೆಡೆ ಬಿಜೆಪಿ ಪರ ವಾತಾವರಣವಿದೆ. ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯಲ್ಲಿ ಜನ ಸೇರುತ್ತಿಲ್ಲ. ಮತ್ತೊಂದೆಡೆ, ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಾಕಷ್ಟು ಜನ ಸೇರುತ್ತಿದ್ದಾರೆ. ಇದು ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದರು.
ಇತ್ತೀಚೆಗೆ ನಡೆದ ತ್ರಿಪುರಾ, ಮೇಘಾಲಯ ಚುನಾವಣೆಯಲ್ಲಿ ಬಿಜೆಪಿ ಶಕ್ತಿ ಏನು ಎಂಬುದು ಸಾಬೀತಾಗಿದೆ. ಇದರ ಜೊತೆಗೆ ಕಾಂಗ್ರೆಸ್ ಅಡ್ರೆಸ್ ಕಳೆದುಕೊಂಡಿರುವುದು ಮತ್ತೊಮ್ಮೆ ದೃಢಪಟ್ಟಿದೆ ಎಂದು ಹೇಳಿದರು. ಇನ್ನು, ಸಚಿವ ವಿ.ಸೋಮಣ್ಣ ಹಾಗೂ ನಾರಾಯಣ ಗೌಡ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಅವರಷ್ಟೇ ಅಲ್ಲ ಯಾರೊಬ್ಬರೂ ಪಕ್ಷ ಬಿಡುವುದಿಲ್ಲ. ಬೇರೆ ಬೇರೆ ಪಕ್ಷದಿಂದ ಬಿಜೆಪಿಗೆ ಹಲವರು ಬರುವರಿದ್ದಾರೆ. ಬಿಜೆಪಿಗೆ ಯಾರಾದರೂ ಬರುವುದಾದರೆ ಮುಕ್ತ ಸ್ವಾಗತ ಎಂದು ಆಹ್ವಾನ ನೀಡಿದರು.
ರಾಜ್ಯದಲ್ಲಿ ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಮುಗಿದ ಬಳಿಕ ನಡೆಯುವ ಪಕ್ಷದ ಶಾಸಕಾಂಗ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದು ನಿರ್ಧಾರ ಆಗಲಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಇದೇ ವೇಳೆ ರಾಹುಲ್ ಗಾಂಧಿ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ ಬಿಎಸ್‌ವೈ, ವಿದೇಶಿ ನೆಲದಲ್ಲಿ ಭಾರತದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ವರ್ತನೆ ಸರಿಯಲ್ಲ ಎಂದರು. ಒಂದು ರಾಷ್ಟ್ರೀಯ ಪಕ್ಷದ ಪ್ರಮುಖ ನಾಯಕರಾಗಿ ಹೀಗೆ ದೇಶ ವಿರೋಧಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವಂಥದ್ದಲ್ಲ. ಕೂಡಲೇ ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.