ಕಲಬುರಗಿ: ರೈಲಿನಲ್ಲಿದ್ದ ಪ್ರಯಾಣಿಕರ ಮೊಬೈಲ್ ಮತ್ತು ಪರ್ಸ್‌ಗಳನ್ನ ಕಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ಚಿತ್ತಾಪುರ ತಾಲೂಕಿನ ವಾಡಿ ರೈಲ್ವೆ ಜಂಕ್ಷನ್ ಪೊಲೀಸರು ಬಂಧಿಸಿದ್ದಾರೆ. ಮಹೇಶ್ (20) ನಾಗಪ್ಪ (21) ಮತ್ತು ಭೀಮಣ್ಣ (21) ಬಂಧಿತ ಆರೋಪಿಗಳು.
ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದವರ ಬಂಧನ: ವಾಡಿ ರೈಲ್ವೆ ಪೊಲೀಸರ ಯಶಸ್ವಿ ಕಾರ್ಯಾಚರಣೆ
ಪ್ರಯಾಣಿಕರ ಸೋಗಿನಲ್ಲಿ ಬಂದು ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ಚಿತ್ತಾಪುರ ತಾಲೂಕಿನ ವಾಡಿ ರೈಲ್ವೆ ಜಂಕ್ಷನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 2ಲಕ್ಷದ 16 ಸಾವಿರ ರೂಪಾಯಿ ಮೌಲ್ಯದ ವಿವಿಧ ಕಂಪನಿಯ 13 ಮೊಬೈಲ್‌ಗಳು ಮತ್ತು ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ವಾಡಿ ರೈಲ್ವೆ ಜಂಕ್ಷನ್ ಆಗಿದ್ದು, ಈ ನಿಲ್ದಾಣದ ಮೂಲಕ ಮುಂಬಯಿ, ದೆಹಲಿ, ಬೆಂಗಳೂರು, ಹೈದರಾಬಾದ್, ಪುಣೆ ಸೇರಿದಂತೆ ದೇಶದ ದೊಡ್ಡ ದೊಡ್ಡ ಮಹಾನಗರಗಳಿಗೆ ತೆರಳುವ ರೈಲುಗಳು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಇಲ್ಲಿ ನಿಲುಗಡೆ ಆಗುತ್ತವೆ. ಈ ಮಧ್ಯೆ ರೈಲುಗಳಿಗೆ ನುಗ್ಗುವ ಖದೀಮರು ಪ್ರಯಾಣಿಕರ ಸೋಗಿನಲ್ಲಿ ಹೋಗಿ ಮೊಬೈಲ್ ಮತ್ತು ಪರ್ಸ್‌ಗಳನ್ನ ಎಗರಿಸುತ್ತಿದ್ದರು.
ಈ ಬಗ್ಗೆ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಅನೇಕ ದೂರುಗಳು ದಾಖಲಾಗಿದ್ದವು. ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಖದೀಮರನ್ನ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.