ಕಲಬುರಗಿ : ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದ ಮೂವರು ಮಕ್ಕಳ ಬಗ್ಗೆ 'ಈಟಿವಿ ಭಾರತ' ಸುದ್ದಿ ಪ್ರಕಟಿಸಿದ ಬಳಿಕ ಮಕ್ಕಳ ಕಲ್ಯಾಣ ಸಮಿತಿ ಎಚ್ಚೆತ್ತುಕೊಂಡಿದ್ದು, ಮೂರು ಕಂದಮ್ಮಗಳಿಗೆ ನೆಲೆ ಒದಗಿಸಿದೆ.
ಶಹಾಬಾದ್ ತಾಲೂಕಿನ ಮರತೂರು ಗ್ರಾಮದಲ್ಲಿ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡು ಯಾರ ಆಸರೆಯೂ ಸಿಗದೆ ಒಂದೊತ್ತು ಊಟಕ್ಕೂ ಪರದಾಡುತ್ತಿದ್ದರು. ಮಧು, ಮನೋಜ ಹಾಗೂ ಮಾಯಾಂಕ್ ಎಂಬ ಮೂವರು ಅನಾಥ ಮಕ್ಕಳ ಕುರಿತು 'ಈಟಿವಿ ಭಾರತ' ದಲ್ಲಿ "ಪುಟ್ಟ ಕಂದಮ್ಮಗಳ ಬದುಕಲ್ಲಿ ವಿಧಿಯಾಟ: ತುತ್ತು ಅನ್ನಕ್ಕಾಗಿ ನಿತ್ಯ ಪರದಾಟ" ಎಂಬ ಶಿರ್ಷಿಕೆಯಡಿ ವಿಸ್ತೃತ ಸುದ್ದಿ ಬಿತ್ತರಿಲಾಗಿತ್ತು. ಸುದ್ದಿ ಪ್ರಕಟವಾದ ಒಂದೆರಡು ಗಂಟೆಗಳಲ್ಲೇ ಮಕ್ಕಳ ನೋವಿಗೆ ರಾಜ್ಯದ ಜನರ ಹೃದಯ ಮಿಡಿದಿದೆ. ರಾಜ್ಯದ ಹಲವೆಡೆಯಿಂದ ಸಹಾಯದ ಹಸ್ತಗಳು ಚಾಚಿ ಬಂದಿವೆ.
ಅನಾಥರಾಗಿದ್ದ ಮೂವರು ಮಕ್ಕಳಿಗೆ ನೆಲೆ ಸಿಕ್ಕಿದೆ ಇನ್ನು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿ ಸುಂದರ್ ಅವರು ಮಾತನಾಡಿ, ಮಕ್ಕಳ ಕಲ್ಯಾಣ ಸಮಿತಿಯವರು ಮರತೂರು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಮೂವರು ಮಕ್ಕಳ ರಕ್ಷಣೆ, ಪೋಷಣೆ, ಶಿಕ್ಷಣ ನೀಡಲು ಸರ್ಕಾರ ಮುಂದೆ ಬಂದಿದ್ದು, ಮರತೂರು ಗ್ರಾಮದಿಂದ ಈಗಾಗಲೇ ಆ ಮಕ್ಕಳನ್ನು ಕಲಬುರಗಿ ಬಾಲ ಮಂದಿರಕ್ಕೆ ಕರೆತರಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗುತ್ತಿದೆ. ಅವರ ಲಾಲನೆ, ಪೋಷಣೆ ಜೊತೆಗೆ ಶಿಕ್ಷಣದ ಜವಾಬ್ದಾರಿಯನ್ನು ಮಕ್ಕಳ ಕಲ್ಯಾಣ ಸಮಿತಿ ವಹಿಸಿಕೊಳ್ಳುತ್ತಿದೆ ಎಂದರು. ಅಲ್ಲದೆ, ಈ ಕುರಿತು ಸುದ್ದಿ ಪ್ರಕಟಿಸಿದ್ದ 'ಈಟಿವಿ ಭಾರತ' ಸುದ್ದಿ ಸಂಸ್ಥೆಗೆ ಧನ್ಯವಾದ ತಿಳಿಸಿದರು. ಹಳ್ಳಿಗಳಲ್ಲಿ ಈ ರೀತಿಯ ಪ್ರಕರಣಗಳು ತುಂಬಾ ಇವೆ. ಈ ರೀತಿಯ ಸುದ್ದಿಗಳು ಪ್ರಕಟಿಸುವುದರಿಂದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಯಬಹುದು ಎಂದು ಸುಂದರ್ ಹೇಳಿದರು.
ಅನಾಥವಾಗಿದ್ದ ನಮಗೆ ಒಂದು ನೆಲೆ ಸಿಕ್ಕಿದ್ದು, ಇದಕ್ಕೆ ಕಾರಣೀಕರ್ತರಾದ 'ಈಟಿವಿ ಭಾರತ' ಗೆ ಬಾಲಕಿ ಮಧು ಧನ್ಯವಾದ ತಿಳಿಸಿದ್ದಾಳೆ. ಒಟ್ಟಾರೆ ಈಟಿವಿ ಭಾರತದ ವರದಿಗೆ ಸ್ಪಂದಿಸಿರುವ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಮತ್ತು ಕಾಳಜಿಗೆ ನಮ್ಮ ಕಡೆಯಿಂದ ಧನ್ಯವಾದ. ಹಾಗೇ ಆಶ್ರಯ ಪಡೆದಿರುವ ಈ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಆಸ್ತಿಯಾಗಲಿ ಅನ್ನೋದು ನಮ್ಮ ಆಶಯ.