ಕಲಬುರಗಿ:ಚಿತ್ತಾಪುರ ಗುಡ್ಡದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಚರ್ಮ, ದಂತ, ಕೂದಲು, ಚಿಪ್ಪು ಮತ್ತು ಮುಳ್ಳುಗಳನ್ನು ಕಳ್ಳಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಚಿತ್ತಾಪುರ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಚಿತ್ತಾಪುರ ತಾಲೂಕಿನ ರಾಂಪುರಹಳ್ಳಿ ಗ್ರಾಮದ ನಿವಾಸಿ ಹಣಮಂತ ಹೆಳವರ, ಭೀಮರಾಯ ಹೆಳವರ ಮತ್ತು ಮಲ್ಲಪ್ಪ ಹೆಳವರ ಬಂಧಿತರು . ಇನ್ನೋರ್ವ ಆರೋಪಿ ಕುಂಬಾರಹಳ್ಳಿ ಗ್ರಾಮದ ಸಾಯಬಣ್ಣ ಹೆಳವರ ತಲೆಮರೆಸಿಕೊಂಡಿದ್ದು, ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.
ಚಿತ್ತಾಪುರ ತಾಲೂಕಿನ ಗುಡ್ಡಗಳಲ್ಲಿ ಕಾಡು ಪ್ರಾಣಿಗಳ ಬೇಟೆಯಾಡಿ ಅಪಾರ ಪ್ರಮಾಣದ ಪ್ರಾಣಿಗಳ ಅಂಗಾಂಗಗಳ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸನ್ನತಿ ಬಳಿಯ ರಾಂಪೂರ ಹಳ್ಳಿಯಲ್ಲಿ ಅರಣ್ಯ ಇಲಾಖೆ ವನ್ಯಜೀವಿಧಾಮದ ಸಂರಕ್ಷಣಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಬೇಟೆಗಾರರ ಮನೆಯಿಂದ ಅಪಾರ ಪ್ರಮಾಣದಲ್ಲಿ ವನ್ಯಪ್ರಾಣಿಗಳ ಅಂಗಾಂಗಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಚಿಪ್ಪು ಹಂದಿಯ ಚಿಪ್ಪುಗಳು, ಮುಳ್ಳು ಹಂದಿಯ ಮುಳ್ಳುಗಳು, ಮುಂಗುಸಿಯ ಕೂದಲು, ನೀರುನಾಯಿಯ ಚರ್ಮ ಮತ್ತು ಕಾಡುಹಂದಿಯ ದಂತ, ಉಡ ಹಾಗೂ ಬೇಟೆಯಾಡಲು ಬಳಸಿದ ಭರ್ಚಿ, ಕ್ಲಚ್‌ವೈರ್ ತಂತಿಗಳು, ಹಾರ್ನ್‌ಸಮೇತ ಇರುವ ಶಿಕಾರಿ ಬ್ಯಾಟರಿ ಟಾರ್ಚ್, ಚೂರಿ, ಪಂಜಾ, ಬಲೆಗಳು, ಕಬ್ಬಿಣದ ರಾಡುಗಳು, ಮೂರು ಮೊಬೈಲ್ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.