ಕಲಬುರಗಿ:ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯ ನಾಯಕರ ವಾಕ್ಸಮರ ಜೋರಾಗಿ ನಡೆಯುತ್ತಿದೆ. ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಮಾತಿನ ಸಮರ ಒಂದು ಹೆಜ್ಜೆ ಮುಂದೆ ಇದ್ದು, ಏಕ ವಚನದಲ್ಲಿಯೇ ಹಾಲಿ ಮತ್ತು ಮಾಜಿ ಶಾಸಕರು ಮಾತಿನ ಕೆಸರೆರಚಾಟ ಮಾಡುತ್ತಿದ್ದಾರೆ.
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಜೈಲು ಪಾಲಾಗಿದ್ದ ಮಹಾಂತೇಶ ಪಾಟೀಲ್ ಬಿಡುಗಡೆಯಾಗಿ ಬಂದ ನಂತರ ಸನ್ಮಾನ ಮಾಡಿದ ವಿಷಯವಾಗಿ ಹಾಲಿ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹಾಗೂ ಕಾಂಗ್ರೆಸ್ನ ಮಾಜಿ ವಿಧಾನಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಅಲ್ಲಮಪ್ರಭು ಪಾಟೀಲ್ ವಿರುದ್ಧ ಏಕ ವಚನದಲ್ಲಿ ಪ್ರಹಾರ ನಡೆಸಿದ ಶಾಸಕ ರೇವೂರಗೆ ಜೈಲಿಗೆ ಹೋಗಬೇಕಾಗುತ್ತೆ ಹುಷಾರ್ ಎಂದು ಮಾಜಿ ಶಾಸಕ ಪಾಟೀಲ್ ಚಾಟಿ ಬೀಸಿದ್ದಾರೆ.
ದಂಧೆಕೋರರನ್ನು ಸಲಹುವುದು ಕಾಂಗ್ರೆಸ್ ಸಂಸ್ಕೃತಿ: ಮಹಾಂತೇಶ ಪಾಟೀಲ್ ಜೈಲಿನಿಂದ ಬಿಡುಗಡೆಯಾದ ದಿವಸ ಅಭಿಮಾನಿಗಳು ಅವರ ಮನೆಗೆ ತೆರಳಿ ಅಭಿನಂದಿಸಿ ಗೌರವಿಸಿದ್ದರು. ಈ ವೇಳೆ ಅಲ್ಲಮಪ್ರಭು ಪಾಟೀಲ್ ಕೂಡ ಅಲ್ಲಿಯೇ ಹಾಜರಿದ್ದ ವಿಡಿಯೋ ವೈರಲ್ ಆಗಿ ಮಾಧ್ಯಮಗಳಲ್ಲಿ ಸುದ್ದಿ ಆಗಿತ್ತು. ಈ ವಿಷಯವಾಗಿ ಪ್ರತಿಕ್ರಿಯೆ ನೀಡಿದ್ದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಅಕ್ರಮ ಮಾಡೋದು, ಅಕ್ರಮ ದಂಧೆಕೋರರನ್ನು ಸಲಹುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಾಗಿದೆ ಎಂದು ಕಿಡಿಕಾರಿದರು.