ಕಲಬುರಗಿ:ಜಿಲ್ಲೆಯ ರಟಕಲ್ ಗ್ರಾಮವನ್ನು ರೆವಿನ್ಯೂ ಹೋಬಳಿ ಕೇಂದ್ರವಾಗಿಸುವಂತೆ ಆಗ್ರಹಿಸಿ ಗ್ರಾಮಸ್ಥರು ವಿನೂತನವಾಗಿ ಪ್ರತಿಭಟಿಸುವ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮವನ್ನು ಹೋಬಳಿ ಮಾಡುವಂತೆ ರಟಕಲ್ ಹೋಬಳಿ ಹೋರಾಟ ಸಮಿತಿಯ ನೇತೃತ್ವದಲ್ಲಿ ರಕ್ತದಿಂದ ಪತ್ರ ಅಭಿಯಾನ ಕೈಗೊಳ್ಳಲಾಗಿದೆ. ಈ ಕುರಿತು ಹಲವು ದಿನಗಳಿಂದ ಹೋರಾಟ ನಡೆಸಲಾಗುತ್ತಿದ್ದು, ಸರ್ಕಾರ ಗ್ರಾಮಸ್ಥರ ಹೋರಾಟಕ್ಕೆ ಕಿವಿಗೊಡದ ಕಾರಣಕ್ಕೆ ಗ್ರಾಮದ ಜನ ವಿನೂತನ ಪ್ರತಿಭಟನೆಗೆ ಮುಂದಾಗಿದ್ದಾರೆ.
ತಾಲೂಕು ಕೇಂದ್ರದಿಂದ 15 ಕಿ.ಲೋ ಮೀಟರ್ ದೂರದಲ್ಲಿರುವ ರಟಕಲ್ ಗ್ರಾಮದಲ್ಲಿ ಪೊಲೀಸ್ ಠಾಣೆ, ವಿದ್ಯುತ್ ಘಟಕ, ಅಂಚೆ ಕಚೇರಿ, ಸರಕಾರಿ ಶಾಲೆಗಳು ಸೇರಿದಂತೆ ಅನೇಕ ಕಚೇರಿಗಳಿವೆ. ಇನ್ನೂ ಅನೇಕ ಕಚೇರಿಗಳನ್ನು ತೆರೆಯಲು ಸರ್ಕಾರಿ ಜಮೀನು ಕೂಡಾ ಇದೆ. ಆದರೂ ಹೋಬಳಿ ಕೇಂದ್ರವಾಗಿಸಲು ಸರ್ಕಾರ ಸಕಾರಾತ್ಮಕ ಕ್ರಮ ಕೈಗೊಳ್ಳುತ್ತಿಲ್ಲ ಅಂತ ರಟಕಲ್ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.