ಕಲಬುರಗಿ:ಆತ ವಿದ್ಯಾವಂತ ಮೇಲಾಗಿ ಕೈಯಲ್ಲಿ ಖಾಸಗಿ ಕೆಲಸವೂ ಇತ್ತು. ಆದರೆ ಮತ್ತೊಬ್ಬರ ಹಂಗಿನಲ್ಲಿ ದುಡಿಯುವ ಬದಲು ಸ್ವಯಂ ಉದ್ಯೋಗ ಮಾಡ್ಬೇಕು ಎಂಬ ಆತನ ತುಡಿತ. ಹೀಗಾಗಿ ಕುರಿ ಸಾಕಾಣಿಕೆ ಕೇಂದ್ರ ತೆರೆದಿದ್ದು, ಕೈ ತುಂಬ ಸಂಪಾದನೆ ಮಾಡುವದರ ಜೊತೆಗೆ ಯಶಸ್ವಿ ಸ್ವಾಭಿಮಾನದ ಬದುಕು ನಡೆಸುತ್ತಿದ್ದಾನೆ.
ಕಲಬುರಗಿ ತಾಲೂಕಿನ ಕುದನೂರು ತಾಂಡಾದಲ್ಲಿ ಸಂತೋಷ ಚವ್ಹಾಣ ಪಿಯುಸಿವರೆಗೆ ಓದಿದ್ದಾರೆ. ಮೊದಲು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು, ಕುರಿಗಳ ಸಾಕಾಣಿಕೆ ಶುರು ಮಾಡಿದ್ದರು. ಎರಡು ವರ್ಷಗಳ ಹಿಂದೆ 8 ಲಕ್ಷ ರೂಪಾಯಿ ಬಂಡವಾಳ ಹಾಕಿ ಈ ವೃತ್ತಿ ಆರಂಭಿಸಿ, ಶಹಾಪೂರ, ಸುರಪೂರ, ಯಾದಗಿರಿ, ಕಲಬುರಗಿ ಮತ್ತು ಆಳಂದ ಸೇರಿದಂತೆ ಹಲವು ಕಡೆಗಳಿಂದ ವಿವಿಧ ತಳಿಯ 90 ಕುರಿಗಳನ್ನು ತಂದಿದ್ದಾರೆ. ಆರಂಭದಲ್ಲಿದ್ದ ತೊಂಬತ್ತು ಕುರಿಗಳು ಕೇವಲ ಒಂದು ವರ್ಷದಲ್ಲಿ 200ಕ್ಕೂ ಗಡಿ ದಾಟಿವೆ. ಈಗ ಏನಿಲ್ಲವೆಂದ್ರೂ ವರ್ಷ 6 ರಿಂದ 7 ಲಕ್ಷ ರೂಪಾಯಿ ಲಾಭ ಮಾಡಿಕೊಳ್ಳುತ್ತಿರುವುದಾಗಿ ಸಂತೋಷ ಚವ್ಹಾಣ ಖುಷಿಯಿಂದ ಹೇಳ್ತಾರೆ.
ಸ್ವಯಂ ಉದ್ಯೋಗ ಮಾಡಿ ಮಾದರಿಯಾಗಿರುವ ಯುವಕ ಇವರು ತಮ್ಮೂರಿನಿಂದ ಎರಡು ಕಿ.ಮೀ ದೂರದಲ್ಲಿರುವ ಐದು ಎಕರೆ ಜಮೀನಿನಲ್ಲಿ ದೊಡ್ಡದಾದ ಶೆಡ್ ಹಾಕಿ ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಕುರಿಗಳನ್ನು ನೋಡಿಕೊಳ್ಳಲು ಓರ್ವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಕುರಿಗಳನ್ನು ಕೇವಲ ಶೆಡ್ಡಿನಲ್ಲಿ ಮೇಯಿಸದೇ ಪಕ್ಕದಲ್ಲಿರುವ ಖುಲ್ಲಾ ಜಮೀನಿನಲ್ಲಿ ಹಗಲು ಹೊತ್ತಿನಲ್ಲಿ ಮೇಯಲು ಬಿಡುತ್ತಾರೆ. ನಂತರ ಸಂಜೆ ಮತ್ತೆ ಶೆಡ್‌ನಲ್ಲಿ ತೊಗರಿ ಹೊಟ್ಟು ಸೇರಿದಂತೆ ಇತರೆ ಆಹಾರಗಳನ್ನು ನೀಡುತ್ತಾರೆ. ಇನ್ನು ಕುರಿಗಳ ಮಾರಾಟಕ್ಕಾಗಿ ಸಂತೋಷ ಎಲ್ಲಿಗೂ ಹೋಗುವದಿಲ್ಲವಂತೆ. ಅವರ ಜಮೀನಿಗೆ ವ್ಯಾಪಾರಸ್ಥರು ಬಂದು ಖರೀದಿ ಮಾಡಿಕೊಂಡು ಹೋಗುತ್ತಾರೆ. ವರ್ಷದಿಂದ ವರ್ಷಕ್ಕೆ ಕುರಿಗಳ ಸಂಖ್ಯೆ ಹೆಚ್ಚಾಗಿ ಲಾಭ ಹೆಚ್ಚಾಗುತ್ತಿದೆ. ಸಂತೋಷ ಚವ್ಹಾಣರ ಕುರಿ ಸಾಕಾಣಿಕೆ ನೋಡಲು ನೋಡಲು ಸಾಕಷ್ಟು ಜನರು ಬಂದು ಹೋಗುತ್ತಿದ್ದಾರೆ.
ಕೇವಲ ಕುರಿಗಳು ಮಾತ್ರವಲ್ಲ, ಕುರಿ ಜೊತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಕೋಳಿಗಳನ್ನು ಕೂಡ ಸಾಕಾಣಿಕೆ ಮಾಡ್ತಿದ್ದಾರೆ. ಒಟ್ಟಾರೆ ಕೇವಲ ಸರಕಾರಿ ನೌಕರಿಬೇಕು ಎನ್ನೋರಿಗೆ ಸಂತೋಷ ಚವ್ಹಾಣ ಮಾದರಿಯಾಗಿದ್ದಾರೆ.