ಕಲಬುರಗಿ:ಟ್ರ್ಯಾಕ್ಟರ್ ಅಪಘಾತದಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಯುವಕನನ್ನು ಸರಿಯಾದ ಸಮಯಕ್ಕೆ ತಮ್ಮ ವಾಹನದಲ್ಲಿಯೇ ಆಸ್ಪತ್ರೆಗೆ ಸಾಗಿಸಿ ಆತನ ಪ್ರಾಣ ಉಳಿಸುವ ಮೂಲಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮತ್ತು ಪೇದೆ ಮಾನವೀಯತೆ ಮೆರೆದಿದ್ದಾರೆ.
ಸೇಡಂ ಹೊರವಲಯದ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಟ್ರ್ಯಾಕ್ಟರ್ವೊಂದು ಮುಗುಚಿಬಿದ್ದು, ಚಾಲಕ ಆಕಾಶ ಬಟಗೇರಾ (26) ಎಂಬಾತ ನರಳಾಡಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ಇದನ್ನು ಗಮನಿಸಿದ ಸಾರ್ವಜನಿಕರು ಆತನನ್ನು ಟ್ರ್ಯಾಕ್ಟರ್ ಅವಶೇಷದಿಂದ ಹೊರತೆಗೆದು ಮೃತ ಪಟ್ಟಿದ್ದಾನೆಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಮೇರೆಗೆ ಪಿಎಸ್ಐ ಸುಶೀಲಕುಮಾರ ಮತ್ತು ಪೇದೆ ವಿಠ್ಠಲರೆಡ್ಡಿ ಮಳೆಯ ಅಬ್ಬರದ ನಡುವೆಯೂ ಸ್ಥಳಕ್ಕೆ ಭೇಟಿ ನೀಡಿದ್ದು, ಯುವಕನ ಬಳಿಹೋಗಿ ಸೂಕ್ಷ್ಮವಾಗಿ ಗಮನಿಸಿದಾಗ ಆತ ಇನ್ನೂ ಉಸಿರಾಡುವುದು ಕಂಡುಬಂದಿದೆ. ಆತ ಬದುಕಿರುವದು ಖಾತರಿಯಾಗುತ್ತಿದ್ದಂತೆ ತಡಮಾಡದೆ ಅಂಬುಲೆನ್ಸ್ಗೆ ಕಾಯದೆ ಮಳೆಯ ಅಬ್ಬರದಲ್ಲಿಯೇ ತಮ್ಮ ಜೀಪ್ನಲ್ಲಿ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಸಕಾಲಕ್ಕೆ ಚಿಕಿತ್ಸೆ ದೊರೆತ ಕಾರಣ ಯುವಕನ ಪ್ರಾಣ ಉಳಿದಿದೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಆಕಾಶ್ನನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪಿಎಸ್ಐ ಸುಶೀಲಕುಮಾರ ಮತ್ತು ಪಿಸಿ ವಿಠ್ಠಲರೆಡ್ಡಿ ಕಾರ್ಯಕ್ಕೆ ಜನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.