ಕಲಬುರಗಿ :ಯುವಕನನ್ನು ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳನ್ನು ಅಫಜಲಪುರ ತಾಲೂಕು ಗೌರ್ (ಕೆ) ಗ್ರಾಮದ ನೀಲಪ್ಪ ಬಂಡೆ, ಮಲ್ಲಿಕಾರ್ಜುನ ಬಂಡೆ ಮತ್ತು ಹನುಮಂತ ಬಂಡೆ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಶೀಘ್ರವೇ ಬಂಧಿಸುವುದಾಗಿ ಎಸ್ಪಿ ಇಶಾ ಪಂತ್ ತಿಳಿಸಿದ್ದಾರೆ.
ಜೂನ್ 16 ರಂದು ಅಫಜಲಪುರ ತಾಲೂಕಿನ ಗೌರ್ (ಕೆ) ಗ್ರಾಮದಲ್ಲಿ ಅಕ್ಷಯಕುಮಾರ ಕ್ಷತ್ರಿಯ(25) ಎಂಬ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನ ಕೊಲೆ ನಡೆದಿತ್ತು. ಕೊಲೆಗೈದ ಆರೋಪಿಗಳಾದ ನೀಲಪ್ಪ ಬಂಡೆ ಮತ್ತು ಮಲ್ಲಿಕಾರ್ಜುನ ಬಂಡೆ ಯವರಿಗೆ ಸೇರಿದ ಜಮೀನನ್ನು ಸಂಜೀವಕುಮಾರ ಉಕ್ಕಲಿ ಎಂಬಾತ ಖರೀದಿಸಿದ್ದ. ಈ ನಡುವೆ ಆರೋಪಿಗಳು ಹೊಲವನ್ನು ವಾಪಸ್ ಕೊಡುವಂತೆ ತಗಾದೆ ತೆಗೆದಿದ್ದರು.