ಕಲಬುರಗಿ : ಡಾನ್ ಆಗಲು ಅಮಾಯಕ ಬಸ್ ಚಾಲಕನ ಕಗ್ಗೊಲೆ ಮಾಡಿರುವ ಪ್ರಕರಣ ಮಾಸುವ ಮುನ್ನವೇ ಮತ್ತೋರ್ವ ಅಮಾಯಕನ ಕೊಲೆ ನಗರದಲ್ಲಿ ನಡೆದಿದೆ. ರಸ್ತೆ ಮೇಲೆ ವಾಹನ ಅಡ್ಡಾದಿಡ್ಡಿ ಚಲಾಯಿಸುವುದನ್ನು ಪ್ರಶ್ನೆ ಮಾಡಿದ್ದಕ್ಕೆ ಯುವಕನ ಮೇಲೆ ಚಾಕುವಿನಿಂದ ಹಲ್ಲೆಗೈದು ಕೊಲೆ ಮಾಡಿರುವ ಘಟನೆ ವರದಿ ಆಗಿದೆ.
ನಗರದ ಹುಮ್ನಾಬಾದ್ ರಿಂಗ್ ರಸ್ತೆ ಆದರ್ಶ ಕಾಲೋನಿ ಮಣೂರ ಆಸ್ಪತ್ರೆ ಬಳಿ ಬೈಕ್ ಮೇಲೆ ಬರುತ್ತಿದ್ದ ಯುವಕನನ್ನು ಇಬ್ಬರು ದುಷ್ಕರ್ಮಿಗಳು ಸೇರಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ ಘಟನೆ ಭಾನುವಾರ ಮಧ್ಯರಾತ್ರಿ ಜರುಗಿದೆ. ಪ್ರಮೋದ ಗೋಳಿ (24) ಕೊಲೆಗೀಡಾದ ಯುವಕ. ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದವನಾದ ಪ್ರಮೋದ ಕಲಬುರಗಿ ನಗರದ ಪೂಜಾ ಕಾಲೋನಿಯಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿ ವಾಸ ಮಾಡುತ್ತಿದ್ದ.
ಭಾನುವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಸಂತ್ರಾಸವಾಡಿಯಿಂದ ಪೂಜಾ ಕಾಲೋನಿಯ ಕಡೆಗೆ ಬೈಕ್ ಮೇಲೆ ರಸ್ತೆಯಲ್ಲಿ ಬರುತ್ತಿದ್ದಾಗ ಅಡ್ಡಾದಿಡ್ಡಿ ಕಾರು ಚಲಾಯಿಸಿಕೊಂಡು ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ಬೈಕ್ ಗೆ ದಾರಿಕೊಡದೆ ಸತಾಯಿಸಿದವರ ಜೊತೆಗೆ ವಾಗ್ವಾದ ನಡೆದಿದೆಯಂತೆ. ಆಗ ಕಾರಿನಿಂದ ಇಳಿದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬೈಕ್ ಸವಾರ ಪ್ರಮೋದನನ್ನು ಕೊಲೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಆಗಿರುವ ಮೃತನ ಸಂಬಂಧಿ ಅವಿನಾಶ್ ತಿಳಿಸಿದ್ದಾರೆ.
ಚಾಕುವಿನಿಂದ ಹಲ್ಲೆ ಮಾಡಿ ಪರಾರಿ: ಪ್ರಮೋದ ಜೊತೆಯಲ್ಲಿ ಬೈಕ್ ಮೇಲಿದ್ದ ಸಂಬಂಧಿ ಅವಿನಾಶ ಪ್ರತ್ಯಕ್ಷದರ್ಶಿಯಾಗಿದ್ದು, ವಾಹನ ಅಡ್ಡಾದಿಡ್ಡಿ ಚಲಾಯಿಸ್ತಿರೋದು ಯಾಕೆ? ಅಂತ ಕೇಳಿದಕ್ಕೆ ಕೊಲೆ ಮಾಡಿ ಪರಾರಿಯಾಗಿದ್ದಾರೆಂದು ತಿಳಿಸಿದ್ಧಾರೆ. ರಾತ್ರಿ ಬೈಕ್ ಮೇಲೆ ಪ್ರಮೋದ ಹಾಗೂ ನಾನು ಹೋಗುವಾಗ ಆದರ್ಶ ನಗರ ಬ್ರಹ್ಮಕುಮಾರಿ ಆಶ್ರಮ ಬಳಿ ಒಂದು ಮಹೇಂದ್ರ ಕಂಪನಿಯ ವಾಹನದಲ್ಲಿ ಇಬ್ಬರು ಇಂಡಿಕೇಟರ್ ಹಾಕೋದು ತೆಗೆಯೋದು, ವಾಹನ ಅಡ್ಡಾದಿಡ್ಡಿ ಓಡಿಸುವುದು ಮಾಡ್ತಿದ್ರು. ಹೀಗೆ ಒಂದು ಕಿಲೋಮೀಟರ್ ದೂರದವರೆಗೆ ಸತಾಯಿಸಿದ್ರು. ಆಗ ಹೀಗೇಕೆ ಮಾಡ್ತಿದ್ದೀರಿ ಅಂತ ಪ್ರಮೋದ್ ಕೇಳಿದ್ದಕ್ಕೆ ವಾಹನದಿಂದ ಇಳಿದವರೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾದ್ರು ಎಂದು ಅವಿನಾಶ ಹೇಳಿದ್ದಾರೆ.
ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮೃತ ಪ್ರಮೋದನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಪ್ರಮೋದನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಚೇತನ ಆರ್ ಹಾಗೂ ಉಪ ಆಯುಕ್ತ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಂ ಬಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.
ಚಾಲಕನ ಕೊಲೆಗೈದು ಪರಾರಿ:ಇತ್ತೀಚಿಗೆ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಮೇ 11 ರಂದು ಹಾಡುಹಗಲೇ ಜನ ಜಂಗುಳಿ ಮಧ್ಯೆ ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ಚಾಲಕನ ಬರ್ಬರ ಹತ್ಯೆ ಮಾಡಲಾಗಿತ್ತು. ಆರೋಪಿಗಳನ್ನು ಬಂಧಿಸಿದ ಪೊಲೀಸರು ಕೊಲೆಗೆ ಕಾರಣ ಕೇಳಿ ಬೆಚ್ಚಿಬಿದ್ದಿದ್ದರು. ಡಾನ್ ಆಗಬೇಕು ಹೆಸರು ಮಾಡಬೇಕಂತ ಯಾರನ್ನೋ ಕೊಲೆ ಮಾಡಲು ಬಂದು ಅವರು ಸಿಗದೆ ಇದ್ದಿದ್ದಕ್ಕೆ ಚಾಲಕನ ಕೊಲೆಗೈದು ಪರಾರಿಯಾಗಿದ್ದರು. ಕೊಲೆಗಡುಕರು ಇಂದು ಒಂದು ಕೊಲೆ ಅಂತ ತಮ್ಮ ಮೊಬೈಲ್ ಸ್ಟೇಟಸ್ ಇಟ್ಟು ವಿಕೃತ ಮೆರೆದಿದ್ದರು. ಇದೀಗ ಕ್ಷುಲ್ಲಕ ಕಾರಣಕ್ಕೆ ಮತ್ತೊಂದು ಹೆಣ ಬಿದ್ದಿದ್ದು ನಗರ ವಾಸಿಗಳಲ್ಲಿ ಆತಂಕ ಹುಟ್ಟುಹಾಕಿದೆ.
ಇದನ್ನೂ ಓದಿ:ಗ್ರಾನೈಟ್ ಅಂಗಡಿ ಮಾಲೀಕನನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು.. ತುಮಕೂರಿನಲ್ಲಿ ಹರಿದ ನೆತ್ತರು