ಕಲಬುರಗಿ :ಜಿಲ್ಲೆಯು 13 ನೇ ಶತಮಾನದಲ್ಲಿ ಬಹುಮನಿ ರಾಜರ ಕೇಂದ್ರಸ್ಥಾನವಾಗಿತ್ತು. ರಾಜ ಮಹಾರಾಜರ ಕುಟುಂಬಸ್ಥರು ಇಲ್ಲಿ ಬದುಕಿ ಬಾಳಿ ಹೋಗಿದ್ದಾರೆ. ಆಗಿನ ಕಾಲದಲ್ಲಿ ಕೊರೆದ ಬಾವಿಗಳು ಇಂದಿಗೂ ಜೀವಂತ ಇವೆ. ಆದ್ರೆ ಸರಿಯಾದ ನಿರ್ವಹಣೆ ಇಲ್ಲದೆ, ಸಾರ್ವಜನಿಕರು ಕಾಳಜಿ ತೋರಿಸದಿರುವ ಕಾರಣಕ್ಕೆ ನೀರು ತುಂಬಿಕೊಂಡು ನಳನಳಿಸಬೇಕಿದ್ದ ಬಾವಿಗಳು ಕಸದ ಕೊಂಪೆಯಾಗಿ ಮಾರ್ಪಟ್ಟಿವೆ.
ನಿರ್ವಹಣೆ ಇಲ್ಲದೆ ತ್ಯಾಜ್ಯದ ಕೊಂಪೆಯಾಗಿವೆ ಕಲಬುರಗಿ ಬಾವಿಗಳು ಕಲಬುರಗಿ ನಗರವೊಂದರಲ್ಲೆ ಸುಮಾರು 100ಕ್ಕೂ ಅಧಿಕ ಬಾವಿಗಳಿವೆ. ಇವುಗಳಲ್ಲಿ 35 ಬಾವಿಗಳು ನಿರ್ವಹಣೆ ಇಲ್ಲದೆ ನಶಿಸಿ ಹೋಗಿವೆ. ರಾಜ ಮಹಾರಾಜರು ನಿರ್ಮಿಸಿದ ಅನೇಕ ಐತಿಹಾಸಿಕ ಬಾವಿಗಳು ಕಸದ ಕೊಂಪೆಯಾಗಿವೆ. ಸಾರ್ವಜನಿಕರು ತ್ಯಾಜ್ಯ ತಂದು ಇಲ್ಲಿ ಸುರಿಯುತ್ತಿದ್ದು, ನೀರು ಕಲುಶಿತವಾಗಿ ಕೊಳಚೆ ನೀರಾಗಿ ಮಾರ್ಪಟ್ಟಿವೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಇದೆ. ಮಳೆಗಾಲವಾದ್ದರಿಂದ ಬಹುತೇಕ ಬಾವಿಗಳಲ್ಲಿ ನೀರು ತುಂಬಿಕೊಂಡಿವೆ. ನೀರು ಸಂಸ್ಕರಿಸದ ಕಾರಣ ಸಂಪೂರ್ಣವಾಗಿ ತ್ಯಾಜ್ಯಮಯವಾಗಿದೆ.
ಬಿಸಿಲು ನಗರಿ ಎಂದೇ ಖ್ಯಾತಿ ಪಡೆದಿರುವ ಕಲಬುರಗಿಯಲ್ಲಿ ಪ್ರತಿ ಬೇಸಿಗೆ ವೇಳೆ ನೀರಿನ ಹಾಹಾಕಾರ ಎದುರಾಗುತ್ತದೆ. ಸಾಕಷ್ಟು ಜಲಸಂಪನ್ಮೂಲ ಇದ್ದರೂ ಸರಿಯಾಗಿ ಬಳಕೆಯಾಗದಿರುವ ಕಾರಣ ನೀರಿಗೆ ಪರಿತಪಿಸುವಂತ ಪರಿಸ್ಥಿತಿ ಇದೆ. ಹಲವು ಬಾವಿಗಳು ಹೂಳು ತುಂಬಿಕೊಂಡಿದೆ. ಬಾವಿಯಲ್ಲಿ ಕಸ ಹಾಕುವದರಿಂದ ನೀರು ಅನುಪಯುಕ್ತವಾಗುತ್ತಿದೆ. ಇನ್ನೊಂದೆಡೆ ಕೊಳಚೆ ನೀರಾಗಿ ಮಾರ್ಪಟ್ಟು ಸೊಳ್ಳೆ ಸೇರಿ ನಾನಾ ಬಗೆಯ ಕ್ರಿಮಿಕೀಟಗಳ ಉತ್ಪತ್ತಿ ತಾಣಗಳಾಗುತ್ತಿವೆ. ಡ್ಯೆಂಗ್ಯೂ, ಚಿಕನ್‌ಗುನ್ಯಾ ಮಲೇರಿಯಾದಂತ ಮಾರಕ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಇಷ್ಟಾದರೂ ಸಾರ್ವಜನಿಕರು ಬಾವಿಗಳಲ್ಲಿ ಕಸ ಹಾಕುವದು ನಿಲ್ಲಿಸಿಲ್ಲ. ಸಂರಕ್ಷಣೆ ಮಾಡಬೇಕಾದ ಮಹಾನಗರ ಪಾಲಿಕೆ ಕೂಡಾ ಕಣ್ಣುಮುಚ್ಚಿ ಕುಳಿತ್ತಿದೆ. ಅಧಿಕಾರಿಗಳು ಮತ್ತು ಸಾರ್ವಜನಿಕರ ನಿರ್ಲಕ್ಷದಿಂದ ಹಾಳುಬಿದ್ದ ಬಾವಿಗಳು ರೋಗ ರುಜಿನಗಳ ಉತ್ಪತ್ತಿಗೆ ತಾಣವಾಗಿ ಪರಿಸರ ಹಾಳಾಗುತ್ತಿದೆ.
ಬಾವಿಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕದೆ ಸರಿಯಾದ ನಿರ್ವಹಣೆ ಮಾಡಿದ್ದೆಯಾದ್ರೆ ಸುಂದರ ಸ್ವಚ್ಛಂದವಾದ ಪರಿಸರ ಸಿಗಲಿದೆ. ಸಾಂಕ್ರಾಮಿಕ ರೋಗಗಳಿಂದ ದೂರ ಇರಬಹುದಾಗಿದೆ. ಮಾತ್ರವಲ್ಲ ನೀರು ಸಂರಕ್ಷಣೆ ಮಾಡಿ ಬೇಸಿಗೆಯಲ್ಲಿ ನೀರಿನ ಹಾಹಾಕಾರ ತಪ್ಪಿಸಲು ದೊಡ್ಡ ಅಸ್ತ್ರವನ್ನಾಗಿ ಬಳಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ.