ಕಲಬುರಗಿ:ಪ್ರಧಾನಿ ಮೋದಿ ಅವರಿಗೆ ನೆರೆ ಮತ್ತು ಬರದ ಸಂಕಷ್ಟಕ್ಕೆ ಗುರಿಯಾದವರನ್ನು ಭೇಟಿ ಮಾಡಲು ಪುರಸೊತ್ತಿಲ್ಲ. ಆದ್ರೆ ಪ್ರಚಾರಕ್ಕಾಗಿ ಅಮೆರಿಕಕ್ಕೆ ಹೋಗುವುದಕ್ಕೆ ಸಮಯ ಸಿಗ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ರು.
ಕಲಬುರಗಿ ನಗರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಉಂಟಾಗಿರೋ ಆರ್ಥಿಕ ಬಿಕ್ಕಟ್ಟು ಇತ್ಯಾದಿಗಳನ್ನು ವಿಷಯಾಂತರ ಮಾಡೋದಕ್ಕೆ ಮೋದಿ ಯತ್ನಿಸುತ್ತಿದ್ದಾರೆ. ಇಲ್ಲಿ ರಾಜ್ಯದ ಜನ ಎದುರಿಸುತ್ತಿರುವ ಸಂಕಷ್ಟಕ್ಕೆ ಮೋದಿ ಎಷ್ಟರಮಟ್ಟಿಗೆ ಸ್ಪಂದಿಸಿದ್ದಾರೆ. ರಾಜ್ಯದ ನೆರೆ ಸಂತ್ರಸ್ತರನ್ನು ಮಾತನಾಡಿಸಲು ಇವರಿಗೆ ಸಮಯವಿಲ್ಲ, ಆದ್ರೆ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಭಾಗಿಯಾಗಲು ದೂರದ ಅಮೆರಿಕಕ್ಕೆ ಹೋಗ್ತಿದಾರೆ. ಇದು ನಮ್ಮ ದುರ್ದೈವ ಎಂದರು.
ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ಕಾರ್ಪೊರೇಟ್ ಸಂಸ್ಥೆಗಳಿಗೆ ನೆರವು:
ಮೋದಿಗೆ ಕಾರ್ಪೊರೇಟ್ ಸಂಸ್ಥೆಗಳಿಗಿರುವ ಕಾಳಜಿ ರೈತರ ಮೇಲಿಲ್ಲ, ಕಾರ್ಪೊರೇಟ್ ಸಂಸ್ಥೆಗಳಿಗೆ ನೆರವು ನೀಡಲಿ ಜೊತೆಗೆ ರೈತರಿಗೂ ನೆರವು ನೀಡಲು ತೊಂದರೆಯೇನು ಎಂದು ಪ್ರಶ್ನಿಸಿದ ಖರ್ಗೆ, ಇಡೀ ದೇಶದ ರೈತರು ಸಂಕಷ್ಟದಲ್ಲಿದ್ದಾರೆ. ಇವರಿಗೆ ನೆರವು ನೀಡೋದನ್ನು ಬಿಟ್ಟು ತನಗೆ ಅನುಕೂಲ ಮಾಡಿಕೊಡೋರಿಗೆ ನೆರವು ನೀಡ್ತಿದಾರೆ. ಆರ್ಬಿಐ ನಿಂದ 1.75 ಲಕ್ಷ ಕೋಟಿ ರೂಪಾಯಿಯನ್ನು ಪಡೆದು ಕಾರ್ಪೊರೇಟ್ ಸಂಸ್ಥೆಗಳಿಗೆ ದಾನ ಮಾಡ್ತಿದ್ದಾರೆ. ತಳಮಟ್ಟದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಮೊದಲ ಕೊಡಿ ಎಂದು ಖರ್ಗೆ ಆಗ್ರಹಿಸಿದರು.
ಹೇಳಿಕೆ ನೀಡೋಕೆ ಪೈಪೋಟಿ:
ನೆರೆ ಪರಿಹಾರಕ್ಕೆ ಕೇಂದ್ರದ ನೆರವು ಕೇಳುವ ಅವಶ್ಯಕತೆಯಿಲ್ಲ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಖರ್ಗೆ, ಪ್ರವಾಹ ಬಂದಂತಹ ಸಂದರ್ಭದಲ್ಲಿ ಕೇಂದ್ರದ ನೆರವು ಕೇಳೋದು ರಾಜ್ಯದ ಹಕ್ಕು, ಅವಶ್ಯಕತೆ ಇಲ್ಲ ಅಂತ ಹೇಳೋದು ಸರಿಯಲ್ಲ ಎಂದರು.
ರಾಜ್ಯ ಸರ್ಕಾರ ಕೊಟ್ಟಿರುವ ಪ್ರಸ್ತಾವನೆಯ ಪೂರ್ಣ ಹಣವಿಲ್ಲದಿದ್ದರೂ, ತುರ್ತು ಪರಿಹಾರವನ್ನಾದ್ರೂ ಕೇಂದ್ರ ಸರ್ಕಾರ ತಕ್ಷಣ ಘೋಷಿಸಬೇಕು ಎಂದು ಒತ್ತಾಯಿಸಿದರು.