ಕಲಬುರಗಿ: ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕಲಬುರಗಿ ತಾಲೂಕಿನ ಬಬಲಾದ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಲಾಲ್ಬಿ ಖಾಸಿಂ ಸಾಬ್ ಎಂದು ಗುರುತಿಸಲಾಗಿದೆ. ಬಬಲಾದ್ ಗ್ರಾಮದ ಪತಿ ಖಾಸಿಂಸಾಬ್ ಹಾಗೂ ಆತನ ಮನೆಯವರು ವಿಷ ಕುಡಿಸಿ ಕೊಲೆಗೈದಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ಬಬಲಾದ ಗ್ರಾಮದ ಖಾಸಿಂಸಾಬ್ ತನ್ನ ಸೋದರತ್ತೆ ಮಗಳಾದ ಸಿಂದಗಿ ಗ್ರಾಮದ ಲಾಲ್ಬಿ ಎಂಬಾಕೆಯನ್ನು ಮದುವೆಯಾಗಿದ್ದ. ಖಾಸಿಂಸಾಬ್ ದಂಪತಿಗೆ ಐದು ಜನ ಮಕ್ಕಳಿದ್ದಾರೆ. ಮದುವೆಯಾದ ನಾಲ್ಕೈದು ವರ್ಷಗಳ ಬಳಿಕ ಖಾಸಿಂ ಮತ್ತೊಂದು ಮದುವೆ ಆಗ್ತೇನೆ, ಅಲ್ಲದೆ ತವರಿಂದ ಚಿನ್ನಾಭರಣ ತರುವಂತೆ ಪೀಡಿಸುತ್ತಿದ್ದನಂತೆ. ಕಳೆದ 15 ವರ್ಷಗಳಿಂದ ತವರು ಮನೆಗೂ ಕಳುಹಿಸದೇ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಪತಿ ಖಾಸಿಂಸಾಬ್, ಎರಡು ವರ್ಷಗಳ ಹಿಂದಷ್ಟೇ ಲಾಲ್ಬಿಗೆ ಹಲ್ಲೆ ಮಾಡಿ ಮನೆಯಿಂದ ಹೊರಗೆ ಹಾಕಿದ್ದನಂತೆ. ನಂತರ ಲಾಲ್ಬಿ ತವರಿಗೆ ಬಂದು ವಾಸವಿದ್ದಳು.
ಬಳಿಕ ಮತ್ತೆ ರಾಜಿ ಪಂಚಾಯತಿ ಮಾಡಿ ಗಂಡನ ಮನೆಯಲ್ಲಿ ಬಿಟ್ಟು ಬರಲಾಗಿತ್ತು. ಆದರೆ ಅಂದಿನಿಂದ ಮತ್ತೆ ಕಿರುಕುಳ ನೀಡಲು ಆರಂಭಿಸಿದ್ದರು. ಲಾಲ್ಬಿಗೆ ಸರಿಯಾಗಿ ಊಟ ಕೊಡದೆ ಹಲ್ಲೆ ಮಾಡುತ್ತಿದ್ದರು. ಕೊನೆಗೆ ಆಹಾರದಲ್ಲಿ ವಿಷ ಹಾಕಿ ಹೊಲಕ್ಕೆ ಹೋಗುವಂತೆ ಹೊಡೆದು ಹೊರಗೆ ಹಾಕಿದ್ದಾರೆ. ಆಗ ಆಕೆ ಅಸ್ವಸ್ಥ ಆಗುತ್ತಿದ್ದಂತೆ ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೂರು ದಿನಗಳ ಬಳಿಕ ಸಾವನ್ನಪ್ಪಿದ್ದಾಳೆ ಎಂದು ಮೃತಳ ಸಹೋದರ ಟೋಲೆಸಾಬ್ ಹೇಳಿದ್ದಾರೆ.