ಕಲಬುರಗಿ: ವಿವಾಹಿತ ಮಹಿಳೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸೀತನೂರು ಗ್ರಾಮದ ಶಾಹೀದಾ ಬೇಗಂ(26) ಎಂದು ಗುರುತಿಸಲಾಗಿದೆ. ಗಂಡನ ಮನೆಯವರೇ ಕೊಲೆ ಮಾಡಿರುವುದಾಗಿ ಮೃತ ಶಾಹೀದಾ ಬೇಗಂ ಪೋಷಕರು ಆರೋಪಿಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಜೇವರ್ಗಿ ತಾಲೂಕಿನ ಗೌಂವ್ಹಾರ ಗ್ರಾಮದ ಶಾಹೀದಾ ಬೇಗಂರನ್ನು ಸೀತನೂರ ಗ್ರಾಮದ ಖಾಜಾ ಹುಸೇನ್ಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ವೇಳೆ ಶಾಹೀದಾ ಬೇಗಂ ಪೋಷಕರು ತಮ್ಮ ಜಾಗವನ್ನು ಮಾರಾಟ ಮಾಡಿ ನಾಲ್ಕು ತೊಲೆ ಚಿನ್ನಾಭರಣ ಐವತ್ತು ಸಾವಿರ ನಗದನ್ನು ನೀಡಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರಂತೆ. ಕೃಷಿ ಮಾಡಿಕೊಂಡಿದ್ದ ಖಾಜಾ ಹುಸೇನ್ ಕುಡಿತದ ಚಟ ಹೊಂದಿದ್ದ. ಅಲ್ಲದೇ ನಿತ್ಯ ಮನೆಗೆ ಕುಡಿದು ಬಂದು ಬೇಗಂ ಜೊತೆಗೆ ಜಗಳ, ದೈಹಿಕ ಹಲ್ಲೆ ನಡೆಸುತ್ತಿದ್ದ. ಅದೂ ಅಲ್ಲದೇ ತವರಿನಿಂದ ಹಣ ತರುವಂತೆ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ.
ಬೇಗಂ ಪೋಷಕರು ದುಡಿಯಲು ಹೈದರಾಬಾದ್ಗೆ ತೆರಳಿದ್ದರು. ಅವರ ಬಳಿ ಹಣವಿಲ್ಲ ಎಂದು ಹೇಳಿದರೂ ಹುಸೇನ್ ಕಿರುಕುಳ ನೀಡುವುದನ್ನು ಬಿಟ್ಟಿರಲಿಲ್ಲ ಎಂದು ಮೃತ ಬೇಗಂ ತನ್ನ ಸಹೋದರಿ ಬಳಿ ಅಳಲು ತೋಡಿಕೊಂಡಿದ್ದಳಂತೆ. ಈ ವಿಷಯ ಶಾಹೀದಾ ಬೇಗಂ ಮನೆಗೆ ಗೊತ್ತಾಗಿ, ಹಲವು ಬಾರಿ ರಾಜಿ ಸಂಧಾನ ನಡೆಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ನಡುವೆ ಶಾಹೀದಾ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಗಂಡ ಮತ್ತು ಆತನ ಮನೆಯವರು ಕಿರುಕುಳ ಕೊಟ್ಟು ಕೊಲೆ ಮಾಡಿ ಬಳಿಕ ನೇಣು ಹಾಕಿದ್ದಾರೆ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.