ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯಲ್ಲಿರುವ ಪುರಾತನ ಕಾಲದ ಬಾವಿ, ಕಲ್ಯಾಣಿ, ಗೋಕಟ್ಟೆ, ಪುಷ್ಕರಣಿಗಳನ್ನು ಸಂರಕ್ಷಣೆ ಮತ್ತು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಪಡಿಸುವ ಕುರಿತು ಸಮಗ್ರ ಕ್ರಿಯಾಯೋಜನೆ ರೂಪಿಸುವಂತೆ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿ, ಸೂಕ್ತ ಪ್ರಸ್ತಾವನೆಯನ್ನು ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಿ ಅಭಿವೃದ್ಧಿಗೆ ಅನುದಾನ ಪಡೆಯುವುದು. ಅಗತ್ಯವಿದ್ದಲ್ಲಿ ಹೆಚ್ಚುವರಿ ಅನುದಾನವನ್ನು ಐತಿಹಾಸಿಕ ಪರಂಪರೆ ತಾಣಗಳ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಬಾವಿ, ಕಲ್ಯಾಣಿಗಳ ಹೂಳನ್ನುನರೇಗಾ ಯೋಜನೆಯಡಿ ತೆಗೆದು ನೀರಿನ ಮೂಲ ಬತ್ತದಂತೆ ಸ್ವಚ್ಚಗೊಳಿಸುವುದು. ಇದರಿಂದ ಬೇಸಿಗೆ ಸಂದರ್ಭದಲ್ಲಿ ಜಲಮೂಲಗಳಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದಲ್ಲದೆ, ಪುರಾತನ ಕಾಲದ ಐತಿಹಾಸಿಕ ತಾಣಗಳನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಿದಂತಾಗುತ್ತದೆ. ಕಲಬುರಗಿ ಕೋಟೆ ಸುತ್ತಮುತ್ತ ಇರುವ 2.5 ಕಿ.ಮೀ ಕೆನೆಲ್ಲನ್ನು ಕ್ಲೀನ್ ಮಾಡಿ ಮಳೆ ನೀರು ಸಂಗ್ರಹಿಸಿ ಇಲ್ಲಿಂದಲೇ ನಗರಕ್ಕೆ ಕುಡಿಯುವ ನೀರು ಪೂರೈಸುವ ಮತ್ತು ಪ್ರವಾಸೋದ್ಯಮದ ಭಾಗವಾಗಿ ಬೋಟಿಂಗ್ ವ್ಯವಸ್ಥೆ ಮಾಡುವ ಸಂಬಂಧ ಪರಿಶೀಲಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡೆ ಅವರಿಗೆ ಪ್ರಾದೇಶಿಕ ಆಯುಕ್ತರು ಸೂಚಿಸಿದ್ರು.