ಕಲಬುರಗಿ:ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು, ಕಬ್ಬಿಗೆ ಸರ್ಕಾರ ನಿಗದಿಗೊಳಿಸಿದ ದರಕ್ಕಿಂತಲೂ ಕಡಿಮೆ ದರ ನೀಡಿ ರೈತರಿಗೆ ವಂಚಿಸುತ್ತಿವೆ ಎಂದು ಕಲಬುರಗಿ ಕಬ್ಬು ಬೆಳೆಗಾರರ ಹೋರಾಟ ಸಮಿತಿ ಸಂಚಾಲಕ ಶ್ರೀಮಂತ ಬಿರಾದಾರ ಆರೋಪಿಸಿದ್ದಾರೆ.
ಸಕ್ಕರೆ ಕಾರ್ಖಾನೆಗಳು ರೈತರಿಗೆ ನಿಗದಿತ ದರ ನೀಡದೇ ವಂಚಿಸುತ್ತಿವೆ: ಶ್ರೀಮಂತ ಬಿರಾದಾರ ಆರೋಪ
ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ನಿಗದಿತ ದರ ನೀಡದೇ ವಂಚಿಸುತ್ತಿದ್ದು, ಕಬ್ಬು ಬೆಳೆಗೆ ಸರ್ಕಾರ ನಿಗದಿಪಡಿಸಿದ ಬೆಲೆಯನ್ನು ಯಾವುದೇ ಕಾರ್ಖಾನೆಗಳು ನೀಡುತ್ತಿಲ್ಲ ಎಂದು ಶ್ರೀಮಂತ ಬಿರಾದಾರ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವರ್ಷ ಸರ್ಕಾರ ಪ್ರತಿ ಟನ್ ಕಬ್ಬಿಗೆ 2,500 ರೂಪಾಯಿ ಎಫ್.ಆರ್.ಪಿ. ದರ ನಿಗದಿಗೊಳಿಸಿತ್ತು. ಆದರೆ, ಅಫಜಲಪುರದ ರೇಣುಕಾ ಶುಗರ್ಸ್ ಕಾರ್ಖಾನೆ 2,300 ರೂಪಾಯಿ ದರ ಮಾತ್ರ ನೀಡಿತ್ತು. ಜಿಲ್ಲೆಯ ಇತರ ಕಾರ್ಖಾನೆಗಳೂ ಇದೇ ಮಾದರಿಯನ್ನು ಅನುಸರಿಸಿ, ರೈತರಿಗೆ ಹಿಂದಿನ ವರ್ಷ ವಂಚಿಸಿದ್ದವು. ಈ ವರ್ಷವೂ ಸಹ ಹವಳಗಾ ರೇಣುಕಾ ಶುಗರ್ಸ್ ಕಾರ್ಖಾನೆ ಎಫ್.ಆರ್.ಪಿ. ದರವನ್ನು 2,853 ರೂಪಾಯಿ ನಿಗದಿಗೊಳಿಸಿದೆ. ಆದರೆ, ಸರ್ಕಾರ ನಿಗದಿಗೊಳಿಸಿದ ದರದಲ್ಲಿ ಬಿಲ್ ಪಾವತಿಸದೇ ಪ್ರತಿ ವರ್ಷವೂ ಸಹ ಕಾರ್ಖಾನೆಗಳು ಕಬ್ಬು ಬೆಳೆಗಾರರನ್ನು ವಂಚಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ರೈತರಿಗೆ ಆಗುತ್ತಿರುವ ಅನ್ಯಾಯ ತಡೆಯಲು, ಕಾರ್ಖಾನೆ ಆರಂಭಕ್ಕೂ ಮುನ್ನವೇ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ರೈತರ ಸಭೆ ನಡೆಸಿ, ಸಕ್ಕರೆ ಕಾರ್ಖಾನೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಎಕ್ಸ್ ಫೀಲ್ಡ್ ನಿಂದಲೇ ಸರ್ಕಾರದ ಎಫ್.ಆರ್.ಪಿ. ದರ ನೀಡಬೇಕೆಂದು ಬಿರಾದಾರ ಆಗ್ರಹಿಸಿದರು.