ಕಲಬುರಗಿ:ಆನ್‌ಲೈನ್ ಕ್ಲಾಸ್ ಇದೆ ಎಂದು ರೂಂ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕು ವಾಡಿ ಪಟ್ಟಣದ ಬಿರ್ಲಾ ಕ್ವಾಟರ್ಸ್‌ನಲ್ಲಿ ನಡೆದಿದೆ.
ವಾಡಿಯಲ್ಲಿರುವ ಬೆಂಗಳೂರು ಬೇಕರಿಯ ಗಿರೀಶ್ ಉಡುಪ ಅವರ ಪುತ್ರ ಗುರುಚರಣ್ ಉಡುಪ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಉಡುಪಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿದ್ದ ಎಂದು ತಿಳಿದು ಬಂದಿದೆ.
ಇದನ್ನೂಓದಿ: ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ: 10 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
ನಿನ್ನೆ (ಆಗಸ್ಟ್ 17 ) ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಅಮ್ಮಾ ನನಗೆ ಆನ್‌ಲೈನ್ ಕ್ಲಾಸ್ ಇದೆ, ಯಾರೂ ಡಿಸ್ಟರ್ಬ್ ಮಾಡಬೇಡಿ ಎಂದು ಹೇಳಿದ್ದ ಗುರುಚರಣ್, ರೂಮ್ ಒಳಗೆ ಹೋಗಿ ಲಾಕ್ ಮಾಡಿಕೊಂಡಿದ್ದ. ಎರಡು ಗಂಟೆಯಾದರೂ ಆತ ಹೊರ ಬರದಿರುವುದನ್ನು ಕಂಡ ಪೋಷಕರು ಬಾಗಿಲು ಬಡಿದಿದ್ದರು. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡು ಕೋಣೆಯ ಬಾಗಿಲು ಒಡೆದು ನೋಡಿದಾಗ ಗುರುಚರಣ್ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ.
ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ, ಯಾವುದೇ ದೂರು ದಾಖಲಾಗಿಲ್ಲ. ಈಗಾಗಲೇ ಅಂತ್ಯಕ್ರಿಯೆ ನಡೆದಿದೆ. ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.