ಕರ್ನಾಟಕ

karnataka

ETV Bharat / state

ಪ್ರವಾಹದಿಂದ ತತ್ತರಿಸಿದ ತೊಗರಿ ಬೆಳೆಗಾರರ ನೆರವಿಗೆ ಸರ್ಕಾರ ಬರುತ್ತಿಲ್ಲ: ಪ್ರಿಯಾಂಕ್ ‌ಖರ್ಗೆ ಕಿಡಿ - Kalburgi district news

ಏಷ್ಯಾ ಖಂಡದಲ್ಲೇ ಕಲಬುರಗಿ ಅತಿ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆಯಾಗಿದ್ದು, ತೊಗರಿ ಕಣಜ ಎಂದೇ ಕರೆಯಲಾಗುತ್ತಿದೆ. ಆದರೆ ಇಲ್ಲಿನ ತೊಗರಿ ಬೆಳೆಗಾರರ ಕಷ್ಟಕ್ಕೆ ರಾಜ್ಯ ಸರ್ಕಾರ ಯಾವುದೇ ರೀತಿ ನೆರವಿಗೆ ಬರುತ್ತಿಲ್ಲ ಎಂದು ಶಾಸಕ ಪ್ರಿಯಾಂಕ್ ‌ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

legislator Priyank Kher
ಶಾಸಕ ಪ್ರಿಯಾಂಕ್ ‌ಖರ್ಗೆ

By

Published : Jan 9, 2021, 10:51 PM IST

ಕಲಬುರಗಿ:ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ ತೊಗರಿ ನಾಡಿನ ಬೆಳೆಗಾರರ‌ ನೆರವಿಗೆ ಬರಲು ‌ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಶಾಸಕ ಪ್ರಿಯಾಂಕ್ ‌ಖರ್ಗೆ ಟೀಕಿಸಿದ್ದಾರೆ.

ಕಳೆದ ಸಾಲಿನಲ್ಲಿ ತೊಗರಿ ಖರೀದಿಗೆ ಪ್ರೋತ್ಸಾಹಧನ ಘೋಷಿಸಿದ್ದ ರಾಜ್ಯ ಸರ್ಕಾರ ಈ ಸಲ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಇದು ಕಲ್ಯಾಣ ಕರ್ನಾಟಕ ಭಾಗಕ್ಕೆ ತೋರಿಸುತ್ತಿರುವ ನಿಷ್ಕಾಳಜಿಗೆ ಹಿಡಿದ ಕೈಗನ್ನಡಿ ಎಂದು ಮಾಧ್ಯಮ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.

ಪ್ರತಿ ವರ್ಷ ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಗೆ ರಾಜ್ಯ ಸರ್ಕಾರ ತನ್ನ ಪ್ರೋತ್ಸಾಹಧನ ನೀಡಿ ತೊಗರಿಯನ್ನು ಖರೀದಿ ಕೇಂದ್ರಗಳ ಮೂಲಕ ಖರೀದಿಸುತ್ತಿತ್ತು. ಆದರೆ ಈ ಸಲ ಏಕಾಏಕಿ ಪ್ರೋತ್ಸಾಹ ಧನಕ್ಕೆ ತೀಲಾಂಜಲಿ ಹಾಡಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ₹6,000ಕ್ಕೆ (ಪ್ರತಿ ಕ್ವಿಂಟಾಲ್) ತೊಗರಿ ಖರೀದಿಸಲು ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಬೆಳೆಗಾರರ ನೆರವಿಗೆ ಧಾವಿಸಿ ಬೆಂಬಲ ಬೆಲೆ ಕೊಟ್ಟು ಖರೀದಿ ಮಾಡಲಾಗಿತ್ತು. 2016-17ನೇ ಸಾಲಿನಲ್ಲಿ ₹450 ಬೆಂಬಲ ಬೆಲೆ ಘೋಷಿಸಲಾಗಿತ್ತು. ಅದರಂತೆ 2017-18ರಲ್ಲಿ ₹550, 2018-19ರಲ್ಲಿ ₹425 ನಿಗದಿಪಡಿಸಲಾಗಿತ್ತು ಎಂದು ಶಾಸಕರು ವಿವರಿಸಿದ್ದಾರೆ.

ಇದನ್ನೂ ಓದಿ...ತಾವು ವಾಸ್ತವ್ಯ ಹೂಡಿದ್ದ ಕ್ರಿಶ್ಚಿಯನ್ನರ​ ಮನೆಯಲ್ಲಿ ಇಷ್ಟಲಿಂಗ ಪೂಜೆ ನೆರೆವೇರಿಸಿದ ಶ್ರೀರಾಮಲು

ಜಿಲ್ಲೆಯ ಶಾಸಕರ ಮೌನ ಯಾಕೆ?:ರಾಜ್ಯದಲ್ಲಿ ಕಳೆದ ವರ್ಷದ ಸುರಿದ ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿಗೆ ಪರಿಹಾರ ವಿತರಣೆ ಸಮರ್ಪಕವಾಗಿ ನಡೆದಿಲ್ಲ. ಕಳೆದ ಅಧಿವೇಶನದಲ್ಲಿ ಕಾನೂನು ಸಚಿವರು ಪ್ರೋತ್ಸಾಹಧನ ನೀಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಅದರಂತೆ ಈ ಸಲ ಪ್ರೋತ್ಸಾಹಧನ ಘೋಷಣೆಯಾಗಿಲ್ಲ.

ಜಿಲ್ಲೆಯಲ್ಲಿ ರೈತರು ಇಷ್ಟೊಂದು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದರೂ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ರೈತರ ಪರ ಧ್ವನಿ ಎತ್ತಬೇಕಿದ್ದ ಕಲಬುರಗಿಯ ಬಿಜೆಪಿ ಶಾಸಕರು ಮೌನವಾಗಿರುವುದು ನೋಡಿದರೆ ಅವರ ಜನಪರ ಕಾಳಜಿ ಎಂತದ್ದು ಎಂದು ಅರ್ಥವಾಗುತ್ತದೆ. ಅದನ್ನೆಲ್ಲಾ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ರಾಜ್ಯ ಸರ್ಕಾರದ ಧೋರಣೆಯ ವಿರುದ್ಧ ಬೀದಿಗಿಳಿಯಲಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಪರಿಹಾರ ನೀಡುವಲ್ಲಿ ವಿಳಂಬ:ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಸುಮಾರು 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ತೊಗರಿ ಬೆಳೆ ನಾಶವಾಗಿದೆ. ಸಾವಿರಾರು ಮನೆಗಳಿಗೆ ನೀರು ನುಗ್ಗಿದೆ ಹಾಗೂ ನೂರಾರು ಮನೆಗಳು ಸಂಪೂರ್ಣ ಹಾಳಾಗಿವೆ. ಹಾನಿಗೊಳಗಾದ ಪ್ರದೇಶಗಳ ಜಂಟಿ‌ ಸರ್ವೇ ಮಾಡಿ ನೊಂದವರಿಗೆ ಪರಿಹಾರ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದೆ. ಕೂಡಲೇ ಪ್ರೋತ್ಸಾಹಧನ ಘೋಷಿಸಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಲೆ ಸೇರಿಸಿ ರಾಜ್ಯ ಸರ್ಕಾರ ತೊಗರಿ ಖರೀದಿಸಬೇಕು ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details