ನಿನ್ನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ಮೇಲೆ ಭಾರತೀಯ ಸೇನೆ ದಾಳಿ ಮಾಡಿತ್ತು. ಇದರ ಬೆನ್ನಲ್ಲೇ ಗದಿಯಲ್ಲಿ ಯದ್ಧದ ವಾತಾವರಣ ಸೃಷ್ಟಿಯಾಗಿದೆ. ರಜೆ ಮೇಲೆ ಬಂದಿದ್ದ ಕಲಬುರಗಿಯ ಯೋಧನಿಗೆ ಮರಳಿ ಕರ್ತವ್ಯಕ್ಕೆ ಹಾಜರಾಗುವಂತೆ ಸೇನಾಧಿಕಾರಿಗಳಿಂದ ಕರೆ ಬಂದಿದೆ.
ಕಲಬುರಗಿಯ ಅಂಬಿಕಾ ನಗರದ ನಿವಾಸಿ ಮಹದೇವ ಕುಂಬಾರ್ ಕಳೆದ 17 ವರ್ಷಗಳಿಂದ ಭಾರತೀಯ ಸೇನೆ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿಯ ಅನಾರೋಗ್ಯದ ಹಿನ್ನೆಲೆ ಕಳೆದ ಎರಡು ದಿನಗಳ ಹಿಂದೆ 25 ದಿನಗಳ ಮಟ್ಟಿಗೆ ರಜೆ ಹಾಕಿ ಕಲಬುರಗಿಗೆ ಆಗಮಿಸಿದ್ದರು. ಆದರೆ ಇದೀಗ ಕಾಶ್ಮೀರ ಗಡಿಯಲ್ಲಿ ಯುದ್ಧ ಕಾರ್ಮೋಡ ಆವರಿಸಿದ್ದರಿಂದ ತಕ್ಷಣವೇ ಮರಳಿ ಕರ್ತವ್ಯಕ್ಕೆ ಹಾಜರಾಗುವಂತೆ ಸೇನಾಧಿಕಾರಿಗಳು ತುರ್ತು ಕರೆ ಮಾಡಿದ್ದರು. ಹೀಗಾಗಿ ಯೋಧ ಕುಂಬಾರ್ ಇಂದು ಬೆಳಗ್ಗೆ ನಾಗರಕೋಯಿಲ್ ಎಕ್ಸ್ಪ್ರೆಸ್ ರೈಲಿನ ಮೂಲಕ ಜಮ್ಮುವಿಗೆ ಪ್ರಯಾಣ ಬೆಳೆಸಿದರು.
ಜಮ್ಮು ಮತ್ತು ಕಾಶ್ಮೀರ ಶ್ರೀನಗರದಲ್ಲಿ ಭೂಸೇನಾ ಯೋಧರಾಗಿರುವ ಮಹಾದೇವ ಅವರ ಕುಟುಂಬದ ರಕ್ತದಲ್ಲಿ ದೇಶಪ್ರೇಮ ಹರಿದಾಡುತ್ತಿದೆ. ಯೋಧ ಮಹಾದೇವ ಅವರ ತಂದೆ ಮೇಜರ್ ಸುಬೇದಾರ, 32 ವರ್ಷಗಳ ಸುದೀರ್ಘ ದಿನಗಳ ಕಾಲ ದೇಶ ರಕ್ಷಣೆ ಕಾರ್ಯ ಮಾಡಿದ್ದಾರೆ. ಪಂಜಾಬ್ ಗೋಲ್ಡನ್ ಟೆಂಪಲ್ ಮೇಲೆ 1971 ರಲ್ಲಿ ನಡೆದಿದ್ದ ದಾಳಿ ವೇಳೆ, 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡು ಗಣನೀಯ ಸೇವೆ ಸಲ್ಲಿಸಿದ್ದಾರೆ.