ಕಲಬುರಗಿ: ಅಂಗಡಿಗೆ ಚಾಕೊಲೇಟ್ ತರಲು ಹೋಗಿದ್ದ ಐದು ವರ್ಷದ ಬಾಲಕಿಗೆ ಹಾವು ಕಚ್ಚಿ ಮೃತಪಟ್ಟಿರುವ ಘಟನೆ ವಾಡಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕೇರಿತಾಂಡಾ ನಿವಾಸಿ ನಂದಿನಿ ಜಾಧವ್ ಮೃತ ಬಾಲಕಿಯಾಗಿದ್ದಾಳೆ. ಇಂದು ಸಾಯಂಕಾಲ 6 ಗಂಟೆ ಸುಮಾರಿಗೆ ಅಂಗಡಿಗೆ ಚಾಕಲೇಟ್ ತರಲು ಹೋಗಿದ್ದ ಬಾಲಕಿ ಮರಳಿ ಬರುವಾಗ ಹಾವು ಕಚ್ಚಿದೆ.
ತಕ್ಷಣ ವಾಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಾಗ ವೈದ್ಯರು ಇಲ್ಲದೆ, ವಿದ್ಯುತ್ ಕೂಡಾ ಇಲ್ಲದೆ ಸಿಬ್ಬಂದಿ ಸಮರ್ಪಕ ಚಿಕಿತ್ಸೆ ನೀಡಲಾಗದೆ ಕಲಬುರಗಿ ಆಸ್ಪತ್ರೆಗೆ ಕರೆದೊಯುವಂತೆ ಸೂಚಿಸಿದ್ದಾರಂತೆ, ಆ್ಯಂಬುಲೆನ್ಸ್ ನಲ್ಲಿ ಕರೆದೊಯ್ಯುವಾಗ ಮಾರ್ಗಮಧ್ಯೆ ಬಾಲಕಿ ಮೃತಪಟ್ಟಿದ್ದಾಳೆ. ತಮ್ಮ ಮಗುವಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದಿರುವ ಕಾರಣ ಮೃತಪಟ್ಟಿದ್ದಾಳೆಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ, ಸೌಕರ್ಯಗಳು ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ. ಸ್ವಚ್ಛತೆ ಕೂಡಾ ಇಲ್ಲ ಎಂದು ಈಟಿವಿ ಭಾರತ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಸ್ವತಃ ಡಿಎಚ್ಓ ಆಸ್ಪತ್ರೆಗೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದರು. ಇದೀಗ ಮತ್ತೊಂದು ಚಿಕಿತ್ಸೆ ಸಿಗದ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ಸಾವು ಕುರಿತಾಗಿ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.