ಕರ್ನಾಟಕ

karnataka

ಟ್ಯಾಕ್ಸ್​ ವಂಚನೆ ತಡೆದು, ಆದಾಯ ಸಂಗ್ರಹ ಹೆಚ್ಚಿಸುವ 'ಜಾಣ ವ್ಯವಸ್ಥೆ' ಜಾರಿ

By

Published : Jun 19, 2019, 4:38 AM IST

ಎಲೆಕ್ಟ್ರಾನಿಕ್ ಡೇಟಾ ಮಷಿನ್ ಮುಖಾಂತರ ಕಂದಾಯ ಸಂಗ್ರಹಿಸಲು ಕಲಬುರಗಿ ಪಾಲಿಕೆ ಮುಂದಾಗಿದೆ. ಇದರಿಂದ ವೇಗದ ಸಂಗ್ರಹ ಮತ್ತು ವಂಚನೆಗೂ ಕಡಿವಾಣ ಬೀಳಲಿದೆ. ತೆರಿಗೆ ವಸೂಲಿ ಸಿಬ್ಬಂದಿ ಮನೆ ಮನೆಗೆ ತೆರಳಿ ಸ್ಥಳದಲ್ಲಿಯೇ ಪಾವತಿ ಮಾಡಿಕೊಳ್ಳುತ್ತಾರೆ.

ಕಲಬುರಗಿಯಲ್ಲಿ 'ಜಾಣ ವ್ಯವಸ್ಥೆ' ಜಾರಿಗೆಗೊಳಿಸಿದ ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್

ಕಲಬುರಗಿ:ಕಲಬುರಗಿ ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿಯನ್ನು ಸರಳೀಕರಣಗೊಳಿಸಿ ಸಂಗ್ರಹ ವಿಳಂಬವನ್ನು ತಪ್ಪಿಸಲು ಎಲೆಕ್ಟ್ರಾನಿಕ್ ಸಾಫ್ಟ್​ವೇರ್​ ಆಧಾರಿತ 'ಜಾಣ ವ್ಯವಸ್ಥೆ' ಜಾರಿಗೆ ತರಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್​ ಹೇಳಿದರು.

ಜನರ ಮನೆ ಬಾಗಿಲಿಗೆ ಹೋಗಿ ತೆರಿಗೆ ಸಂಗ್ರಹಿಸಲು ಅನುಕೂಲವಾಗುವಂತಹ ಯಂತ್ರಗಳನ್ನು ಪಾಲಿಕೆ ಸಿಬ್ಬಂದಿಗೆ ನೀಡಿ, ಬಳಿಕ ಮಾತನಾಡಿದ ಅವರು, ಎಲೆಕ್ಟ್ರಾನಿಕ್ ಡೇಟಾ ಮಷಿನ್ ಮುಖಾಂತರ ಕಂದಾಯ ಸಂಗ್ರಹಿಸಲು ಪಾಲಿಕೆ ಮುಂದಾಗಿದೆ. ಇದರಿಂದ ವೇಗದ ಸಂಗ್ರಹ ಮತ್ತು ವಂಚನೆಗೂ ಕಡಿವಾಣ ಬೀಳಲಿದೆ. ತೆರಿಗೆ ವಸೂಲಿ ಸಿಬ್ಬಂದಿ ಮನೆ ಮನೆಗೆ ತೆರಳಿ ಸ್ಥಳದಲ್ಲಿಯೇ ಪಾವತಿ ಮಾಡಿಕೊಳ್ಳುತ್ತಾರೆ. ಇದರಿಂದ ಪಾವತಿದಾರರಿಗೂ ಹಾಗೂ ಸಿಬ್ಬಂದಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.

'ಜಾಣ ವ್ಯವಸ್ಥೆ' ಕುರಿತು ಮಾಹಿತಿ ಹಂಚಿಕೆ

ಪ್ರಾಯೋಗಿಕವಾಗಿ ಪಾಲಿಕೆ ವ್ಯಾಪ್ತಿಯ 5 ವಾರ್ಡ್‍ಗಳಲ್ಲಿ ಇದನ್ನು ಆರಂಭಿಕ ಹಂತದಲ್ಲಿ ಜಾರಿಗೆ ತರಲಾಗುತ್ತಿದೆ. ಇದರ ಸಾಧಕ- ಬಾಧಕಗಳನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ಉಳಿದ ಎಲ್ಲ 55 ವಾರ್ಡ್‍ಗಳಲ್ಲಿ ಬಳಸಲಾಗುವುದು. ಇದಲ್ಲದೆ, ಆನ್‍ಲೈನ್ ಮೂಲಕವು ಕರ ಪಾವತಿ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆದಿದೆ ಎಂದರು.

ಆಧುನಿಕ ಸಾಫ್ಟ್​ವೇರ್​ ಒಳಗೊಂಡ 40 ಉಪಕರಣಗಳನ್ನು ಸಿಬ್ಬಂದಿಗೆ ನೀಡಲಾಗುತ್ತಿದೆ. ಮೊಬೈಲ್​ ಗಾತ್ರದ ಈ ಯಂತ್ರ ಟೈಪಿಂಗ್ ಹಾಗೂ ಮುದ್ರಣ ವ್ಯವಸ್ಥೆಯನ್ನೂ ಒಳಗೊಂಡಿದೆ. ನಗದು, ವಿವಿಧ ಕಾರ್ಡ್​ಗಳು, ಚೆಕ್, ಡಿಡಿ ಮೂಲಕ ಕೂಡ ತೆರಿಗೆ ಪಾವತಿಸಬಹುದು ಎಂದು ವಿವರಿಸಿದರು.

ಈ ವ್ಯವಸ್ಥೆಯಿಂದ ಸಾರ್ವಜನಿಕರು ಪಾಲಿಕೆಯ ಕಚೇರಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ತೆರಿಗೆ ಕಟ್ಟುವುದು ತಪ್ಪುವುದಲ್ಲದೇ ಅವರ ಸಮಯ ಕೂಡ ಉಳಿತಾಯ ಆಗಲಿದೆ. ಸಾರ್ವಜನಿಕರು ನೂತನ ವ್ಯವಸ್ಥೆ ಜಾರಿಗೆ ಸಹಕರಿಸಬೇಕು ಎಂದು ತರನ್ನುಮ್ ಮನವಿ ಮಾಡಿದರು.

ಚಾಲ್ತಿ ತೆರಿಗೆ, ಬಾಕಿ ಮೊತ್ತ, ಅನಧಿಕೃತ ನೀರಿನ ಸಂಪರ್ಕಕ್ಕೆ ಶುಲ್ಕ ನಿಗದಿ, ಅಧಿಕೃತಗೊಳಿಸಿ ಶುಲ್ಕ ಪರಿಶೀಲಿಸುವುದು, ವ್ಯಾಪಾರ ಪರವಾನಿಗೆ ಶುಲ್ಕ ಮುಂತಾದವನ್ನೂ ಇದರ ಮೂಲಕ ತೆಗೆದುಕೊಳ್ಳಲಾಗುತ್ತದೆ. ತೆರಿಗೆ ವಂಚನೆಯಾಗಿದ್ದರೆ ಸ್ಥಳದಲ್ಲಿಯೇ ದಂಡ ಹಾಕಲಾಗುತ್ತದೆ. ಜಿಪಿಎಸ್​ ವ್ಯವಸ್ಥೆ ಮುಖಾಂತರ ಎಲ್ಲವನ್ನೂ ದಾಖಲಿಸಲಾಗುತ್ತದೆ. ಹೀಗಾಗಿ, ಯಾವುದೇ ಮೋಸಕ್ಕೆ ಇದರಡಿ ಜಾಗವಿಲ್ಲ ಎಂದು ಮಾಹಿತಿ ನೀಡಿದರು.

For All Latest Updates

TAGGED:

kalburgi

ABOUT THE AUTHOR

...view details