ಕಲಬುರಗಿ: ಭೀಮಾ ನದಿ ಪ್ರವಾಹದಿಂದ ಜಿಲ್ಲೆಯ ಅಫಜಲಪುರ ತಾಲೂಕಿನ ಶಿರವಾಳ ಗ್ರಾಮ ಜಲಾವೃತವಾಗಿದ್ದು, ಪ್ರವಾಹ ಸಂತ್ರಸ್ತರ ಗೋಳು ಕೇಳಲು ಯಾವೊಬ್ಬ ಅಧಿಕಾರಿಗಳು ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಭೀಮಾ ನದಿಗೆ 8.50 ಲಕ್ಷ ಕ್ಯೂಸೆಕ್ಗೂ ಅಧಿಕ ನೀರು ಹರಿಬಿಡಲಾಗಿದೆ. ಇದರಿಂದಾಗಿ ನದಿಪಾತ್ರದ 154ಕ್ಕೂ ಅಧಿಕ ಗ್ರಾಮಗಳಿಗೆ ಜಲ ಕಂಟಕ ಎದುರಾಗಿದೆ. ಜಿಲ್ಲೆಯ ಅಫಜಲಪುರ ತಾಲೂಕಿನ ಶಿರವಾಳ ಗ್ರಾಮಕ್ಕೂ ನೀರು ನುಗ್ಗಿ 20ಕ್ಕೂ ಅಧಿಕ ಮನೆಗಳು ನೀರಿನಲ್ಲಿ ಮುಳುಗಿದ್ದು, ಬಡ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಇಷ್ಟಾದರೂ ಸಹ ಯಾವುದೇ ಜನ ಪ್ರತಿನಿಧಿಯಾಗಲಿ, ಸಂಬಂಧಿಸಿದ ಅಧಿಕಾರಿಗಳಾಗಲಿ ಸಂತ್ರಸ್ತರ ಗೋಳು ಕೇಳಲು ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.