ಕಲಬುರಗಿ: "ನಾನು ಹಿಂದೂ ಧರ್ಮವನ್ನು ಎಂದೂ ವಿರೋಧಿಸಿಲ್ಲ. ಆದರೆ, ಮನುವಾದ ಮತ್ತು ಹಿಂದುತ್ವದ ವಿರೋಧಿಯಾಗಿದ್ದೇನೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ರೋಟರಿ ಕ್ಲಬ್ ಮೈದಾನದಲ್ಲಿ ಆಳಂದ ಮಾಜಿ ಶಾಸಕ ಬಿ.ಆರ್.ಪಾಟೀಲ್ ಜೀವನ ಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
"ನನ್ನನ್ನು ಹಿಂದೂ ಧರ್ಮದ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ನಾನೂ ಸಹ ಹಿಂದೂನೇ. ಯಾವುದೇ ಧರ್ಮದಲ್ಲೂ ಕೊಲೆ, ಹಿಂಸೆಗೆ ಪ್ರೋತ್ಸಾಹವಿಲ್ಲ. ಇದಕ್ಕೆಲ್ಲ ಪ್ರೋತ್ಸಾಹ ಇರೋದು ಕೇವಲ ಹಿಂದುತ್ವದಲ್ಲಿ ಮಾತ್ರ" ಎಂದು ನಿನ್ನೆ ಸಿದ್ದರಾಮಯ್ಯ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
ನಿಮ್ಮ ಆಡಳಿತದಲ್ಲಿಯೂ ಹಿಂದೂಗಳ ಕೊಲೆಯಾಗಿದ್ದವಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನಮ್ಮಕಾಲದಲ್ಲಿ ಹಿಂದೂಗಳದ್ದಷ್ಟೇ ಹತ್ಯೆ ಆಗಿಲ್ಲ. ಹಿಂದೂಗಳು ಹಾಗು ಅಲ್ಪಸಂಖ್ಯಾತರ ಕೊಲೆಗಳೂ ಆಗಿವೆ. ಅದಕ್ಕೂ ಬಿಜೆಪಿ ಆರ್ಎಸ್ಎಸ್ನವರೇ ಕಾರಣ. ಪರೇಶ್ ಮೇಸ್ತಾ ಕೊಲೆಯಾದಾಗ ದೊಡ್ಡ ಗಲಾಟೆ ಮಾಡಿದ್ದರು. ಪ್ರಕರಣವನ್ನು ಸಿಬಿಐಗೆ ವಹಿಸಿದೆವು. ಬಳಿಕ ಆತನ ಸಾವು ಸಹಜ ಸಾವು ಎಂದು ತನಿಖೆಯಲ್ಲಿ ಬಯಲಾಯ್ತು. ಇದೇ ರೀತಿ 8 ಪ್ರಕಣಗಳನ್ನು ಸಿಬಿಐಗೆ ತನಿಖೆಗೆ ನೀಡಿದ್ದೆವು. ಬಿಜೆಪಿಯವರು ಸುಳ್ಳು ಹೇಳ್ತಾರೆ, ಅವರು ಹೇಳುವ ಸುಳ್ಳಿಗೆ ಉತ್ತರ ಕೊಡ್ತಾ ಕೂರಕ್ಕಾಗಲ್ಲ" ಎಂದು ಹರಿಹಾಯ್ದರು.