ಕಲಬುರಗಿ:ರಾಜ್ಯದಲ್ಲಿ ಎರಡು ಸರ್ಕಾರಗಳಿವೆ, ಒಂದು ಸರ್ಕಾರ ಸಿಎಂ ಯಡಿಯೂರಪ್ಪ ಅವರದ್ದು ಇದ್ದರೆ, ಇನ್ನೊಂದು ಸಿಎಂ ಅವರ ಪುತ್ರ ವಿಜಯೇಂದ್ರ ಅವರದ್ದು. ಎಲ್ಲರೂ ಸೇರಿ ರಾಜ್ಯವನ್ನು ಲೂಟಿ ಹೊಡೆಯುವ ಕೆಲಸ ಮಾಡುತ್ತಿದ್ದಾರೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಭೀಮಾನದಿ ಪ್ರವಾಹದಿಂದ ಉಂಟಾದ ಹಾನಿ ವೀಕ್ಷಣೆಗೆಂದು ಆಗಮಿಸಿದ ಸಿದ್ದರಾಮಯ್ಯ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ಆಗಷ್ಟ್, ಸೆಪ್ಟೆಂಬರ್ ನಲ್ಲಿ ಒಂದಡೆ ಮಳೆ, ಇನ್ನೊಂದಡೆ ಕೊರೊನಾ ಇದ್ದರೂ ಅಧಿಕಾರಿಗಳಿಗೆ ಸಲಹೆ ಸೂಚನೆ ಕೊಡಲು ಉಸ್ತುವಾರಿಗಳು ತಮ್ಮ ಜಿಲ್ಲೆಯತ್ತ ಸುಳಿದಿಲ್ಲ. ಕಂದಾಯ ಸಚಿವ ಆರ್.ಅಶೋಕ್ ಬರ್ತಾರೆ ಪಿಕ್ನಿಕ್ ಮಾಡಿ ಹೋದಂಗೆ ಹೋಗ್ತಾರೆ. ಸಿಎಂ ಮೇಲಿನಿಂದಲೇ ಪರಿಶೀಲನೆ ಮಾಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಹೋಗುತ್ತಾರೆ. ಕನಿಷ್ಟ ಪಕ್ಷ ಸ್ಥಳಿಯ ಶಾಸಕರೊಂದಿಗೆ ಚರ್ಚೆ ಮಾಡಿಲ್ಲ, ಹೀಗಾದರೆ ಇಲ್ಲಿನ ವಾಸ್ತವತೆ ಹೇಗೆ ಗೊತ್ತಾಗುತ್ತದೆ. ಮೇ ತಿಂಗಳಿನಿಂದ ಕಲಬುರಗಿ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದಿಲ್ಲ, ಹೀಗಾದರೆ ಅಧಿಕಾರಿಗಳಿಗೆ ಲಂಗು ಲಗಾಮ್ ಇಲ್ಲದಂತಾಗುತ್ತದೆ ಎಂದು ಹೇಳಿದರು.
ರಾಜ್ಯದ 23 ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಸಾಕಷ್ಟು ಹಾನಿ ಆಗಿದ್ದರು, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ. 2019 ರಲ್ಲಿ ಆಗಿರುವ ನಷ್ಟ ಕೂಡಾ ಇದೂವರೆಗೆ ಹಲವರಿಗೆ ಸಿಕ್ಕಿಲ್ಲ, ಆಡಳಿತದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.