ಬಿಎಸ್‌ವೈ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಕಲಬುರಗಿ: ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಬಸ್ ಪಂಕ್ಚರ್ ಆಗಿದೆ ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಯಡಿಯೂರಪ್ಪ ಅವರನ್ನೇ ಪಂಕ್ಚರ್ ಮಾಡಿದಾರೆ. ಅದಕ್ಕಾಗಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಸದ್ಯ ಅವರ ರಥ ಪಂಕ್ಚರ್ ಆಗದೇ ಇದ್ರೆ ಸಾಕು ಎಂದರು.
ಬಿಎಸ್‌ವೈ ಬಗ್ಗೆ ನನಗೆ ಅಪಾರವಾದ ಗೌರವ ಮತ್ತು ಅನುಕಂಪವಿದೆ. ಅವರು ಆರೋಗ್ಯವಾಗಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಹೋರಾಟ ಮಾಡುತ್ತಿದ್ದಾರೆ. ಕಳೆದ ಬಾರಿ ಯಡಿಯೂರಪ್ಪ ಇದ್ದಾಗಲೇ 104 ಸೀಟು ಬಂದಿದ್ವು. ಈಗ ಅವರು ಮೈನಸ್ ಆಗಿದ್ದಾರೆ. ಈಗೆಷ್ಟು ಬರ್ತಾವೆ ನೋಡಿ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ನಾವೆಲ್ಲಾ ಒಗ್ಗಟ್ಟಾಗಿದ್ದೇವೆ, ಕಾಂಗ್ರೆಸ್ನ ಬಸ್ ಮಧ್ಯದಲ್ಲೇ ಪಂಕ್ಚರ್ ಆಗುತ್ತದೆ.. ಬಿ ಎಸ್ ಯಡಿಯೂರಪ್ಪ
ಹೈಕಮಾಂಡ್ ತೀರ್ಮಾನ:ಕಾಂಗ್ರೆಸ್‌ನವರು ಅಧಿಕಾರಕ್ಕೆ ಬರುವ ಹಗಲು ಕನಸು ಕಾಣ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ನಾವ್ಯಾರೂ ಹಗಲು ಕನಸು ಕಾಣ್ತಿಲ್ಲ. ಈಗಿನ ವಾಸ್ತವಿಕ ವಾತಾವರಣ ನೋಡಿ ಹೇಳುತ್ತಿದ್ದೇವೆ. ಬೆಲೆ ಏರಿಕೆ, ದುರಾಡಳಿತ, ಭ್ರಷ್ಟಾಚಾರ, ಜನ ವಿರೋಧಿ ನೀತಿಗಳಿಂದ ಸದ್ಯ ಬಿಜೆಪಿ ಸರ್ಕಾರದ ವಿರೋಧಿ ಅಲೆಯಿದೆ. ನಾವು ಅಧಿಕಾರಕ್ಕೆ ಬರೋದು ನಿಶ್ಚಿತ. ಸಿಎಂ ಆಯ್ಕೆ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ತೀರ್ಮಾನ ಮಾಡಲಿದೆ.
ಕ್ಷೇತ್ರ ಫಲಾಯಾನ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಸೋಲುತ್ತೇನೆ ಅನ್ನೋ ಭಯದಿಂದ ಬಾದಾಮಿ ಸ್ಪರ್ಧೆಯಿಂದ ಹಿಂದೆ ಸರಿದಿಲ್ಲ. ಕೋಲಾರ ಕ್ಷೇತ್ರ ಸಮೀಪ ಆಗುತ್ತದೆ ಎಂದು ಅಲ್ಲಿಂದ ಸ್ಪರ್ಧಿಸುತ್ತಿದ್ದೇನೆ. ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ನನನ್ನ ಸೋಲಿಸಲು ಬಹಳ ಪ್ರಯತ್ನ ಮಾಡಿದ್ರು. ಆದರೆ ಬಾದಾಮಿಯಲ್ಲಿ ಜನ ನನ್ನನ್ನ ಬಹಳ ಪ್ರೀತಿಯಿಂದ ಸ್ವೀಕರಿಸಿದರು. ಕ್ಷೇತ್ರ ಬಿಡಬೇಡಿ, ನಿಮಗೆ ಓಡಾಡೋಕೆ ಕಷ್ಟವಾದ್ರೆ ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಇಂತಹ ಪ್ರೀತಿ ಯಾರಾದರೂ ಕೊಡ್ತಾರೇನ್ರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕಾಂಗ್ರೆಸ್ ಕಾಲೆಳೆದಿದ್ದ ಯಡಿಯೂರಪ್ಪ: ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ನಾವೆಲ್ಲರೂ ಒಟ್ಟಾಗಿದ್ದೇವೆ, ನಾವು ಮೂರು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡಲಿದ್ದೇವೆ, ಕಾಂಗ್ರೆಸ್ ನ ಬಸ್ ಯಾತ್ರೆ ಮಧ್ಯದಲ್ಲೇ ಪಂಕ್ಚರ್ ಆಗುತ್ತದೆ. ಅದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ, ರಾಜ್ಯದಲ್ಲಿ ಮತ್ತೆ ಕಮಲ ಅರಳುವುದು ನಿಶ್ಚಿತ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದರು. ನಗರದ ಅರಮನೆ ಮೈದಾನದಲ್ಲಿ ನಿನ್ನೆ(ಶನಿವಾರ) ನಡೆದ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ದೊಡ್ಡ ಕೊಡುಗೆ ಕೊಡಲಾಗಿದೆ. ಈ ಚುನಾವಣೆಯಲ್ಲಿ 130-140 ಸ್ಥಾನ ಗೆಲ್ಲುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ಯಾರಿಂದಲೂ ಇದನ್ನು ತಡೆಯಲು ಸಾಧ್ಯವಿಲ್ಲ, ಕಾಂಗ್ರೆಸ್ ನಲ್ಲಿ ನಾನೇ ಸಿಎಂ ಅನ್ನೋ ಸಂಘರ್ಷ ಶುರುವಾಗಿದೆ, ಕಾಂಗ್ರೆಸ್ ನಾಯಕ ಯಾರು? ರಾಹುಲ್ ಗಾಂಧಿನಾ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ:ಕಾಂಗ್ರೆಸ್ ಬಸ್‌ಗೆ ಡಿಕೆಶಿ ಕಂಡಕ್ಟರ್, ಸಿದ್ದು ಡ್ರೈವರ್, ಬಸ್ ಪಂಕ್ಚರ್: ಬೊಮ್ಮಾಯಿ ವ್ಯಂಗ್ಯ