ಕಲಬುರಗಿ:ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಕಾ ಅಂತ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪಾಲಿಕೆ ಅಧಿಕಾರ ಹಿಡಿಯಲು ರಣತಂತ್ರ ರೂಪಿಸಲಾಗಿದೆ. ಖರ್ಗೆ ಅವರು ಈಗಾಗಲೇ ಜೆಡಿಎಸ್ ವರಿಷ್ಠರೊಂದಿಗೆ ಮಾತನಾಡಿದ್ದಾರೆ. ಜ್ಯಾತ್ಯತೀತ ನಿಲುವಿನೊಂದಿಗೆ ಕಾಂಗ್ರೆಸ್ ಜೊತೆ ಜೆಡಿಎಸ್ ಕೈ ಜೋಡಿಸಲಿದೆ ಎಂದರು.
ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಪಕ್ಕಾ ಎಂದರು. ಇದೇ ವೇಳೆ, ಬಿಜೆಪಿ ವಿರುದ್ಧ ಗುಡುಗಿದ ಪಾಟೀಲ್, ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಮಾನ ಮರ್ಯಾದೆ ಇಲ್ಲದವರು. ಕುಮಾರಸ್ವಾಮಿ ಸರ್ಕಾರವನ್ನ ಕೆಡವಿ ಇದೀಗ ಪಾಲಿಕೆ ಮೈತ್ರಿಗಾಗಿ ಮತ್ತೆ ಜೆಡಿಎಸ್ ಮನೆ ಬಾಗಿಲಿಗೆ ಹೋಗಿದ್ದಾರೆ ಎಂದು ಶರಣಪ್ರಕಾಶ ಪಾಟೀಲ್ ಕಿಡಿಕಾರಿದ್ದಾರೆ.