ಕರ್ನಾಟಕ

karnataka

ETV Bharat / state

Congress Guarantee Scheme: ಶಕ್ತಿ ಯೋಜನೆಗೆ ಚಾಲನೆ.. ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸಲು ಯೋಜನೆ ಜಾರಿಗೆ - ಸಚಿವ ಪ್ರಿಯಾಂಕ್ ಖರ್ಗೆ - ಈಟಿವಿ ಭಾರತ್​ ಕರ್ನಾಟಕ

ನುಡಿದಂತೆ ನಡೆದಿದ್ದು, ಗ್ಯಾರಂಟಿಗಳನ್ನು ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಶಕ್ತಿ ಯೋಜನೆಗೆ ಚಾಲನೆ
ಶಕ್ತಿ ಯೋಜನೆಗೆ ಚಾಲನೆ

By

Published : Jun 11, 2023, 10:49 PM IST

ಗ್ಯಾರಂಟಿಗಳ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ- ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ :ವಿಧಾನಸಭಾಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ರಾಜ್ಯ ಸರ್ಕಾರವು ಪಂಚ ಉಚಿತ ಗ್ಯಾರಂಟಿ ಯೋಜನೆ ಜಾರಿಗೆ ಈಗಾಗಲೇ ಆದೇಶ ಹೊರಡಿಸಿದೆ. ಯಾವುದೇ ಲಿಂಗ ಬೇಧವಿಲ್ಲದೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸುವುದು ಈ ಯೋಜನೆಗಳ ಮುಖ್ಯ ಉದ್ದೇಶವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಭಾನುವಾರ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಆಯೋಜಿಸಿದ ಕಾರ್ಯಕ್ರಮದಲ್ಲಿ "ಶಕ್ತಿ" ಯೋಜನೆಯನ್ನು ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಾವು ನೀಡಿದ ವಾಗ್ಧಾನದಂತೆ ಇಂದು ಮಹಿಳೆಯರು ಸಾರಿಗೆ ಬಸ್‍ನಲ್ಲಿ ಉಚಿತವಾಗಿ ಪ್ರಯಾಣಿಸುವ "ಶಕ್ತಿ" ಯೋಜನೆ ಜಾರಿಗೆ ತಂದಿದ್ದೇವೆ. ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿಗಳ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಮೊದಲ ಪ್ರಯತ್ನವಾಗಿ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 1.40 ಲಕ್ಷ ಸೇರಿದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಪ್ರತಿನಿತ್ಯ 7.35 ಲಕ್ಷ ಮಹಿಳಾ ಪ್ರಯಾಣಿಕರು ಇದರ ಸೌಲಭ್ಯ ಪಡೆಯಲಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಕಂಡಕ್ಟರ್ ಸ್ಟೈಲ್​ನಲ್ಲಿ ಟಿಕೆಟ್​ ಕೊಟ್ಟ ಪ್ರಿಯಾಂಕ್ ಖರ್ಗೆ

ಮಾಸಿಕ 3,000 ರೂ. ನಿರುದ್ಯೋಗ ಭತ್ಯೆ ನೀಡುವ “ಯುವ ನಿಧಿ”, ಹಸಿವು ಮುಕ್ತ ಕರ್ನಾಟಕ್ಕಾಗಿ “ಅನ್ನಭಾಗ್ಯ” ಯೋಜನೆಯಡಿ ಪ್ರತಿ ಸದಸ್ಯನಿಗೆ 10 ಕೆ.ಜಿ. ಆಹಾರ ಧಾನ್ಯ, ಮನೆಯ ಯಜಮಾನಿಗೆ 2,000 ರೂ. ಒದಗಿಸುವ “ಗೃಹ ಲಕ್ಷ್ಮೀ”, ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ನೀಡುವ “ಗೃಹ ಜ್ಯೋತಿ” ಯೋಜನೆ ಜಾರಿಗೆ ತರಲಾಗುತ್ತಿದೆ. ಮುಂದೆ ಬರುವಂತಹ ದಿನದಲ್ಲಿ ಈ ಯೋಜನೆಯ ಲಾಭ ರಾಜ್ಯದ ಜನತೆ ಪಡೆಯಲಿದ್ದಾರೆ. ಹಾಗು ರಾಜ್ಯದಲ್ಲಿ ಖಾಲಿ ಇರುವ 2.50 ಲಕ್ಷ ಹುದ್ದೆಗಳನ್ನು ಸಹ ಭರ್ತಿ ಮಾಡಲು ಚಿಂತನೆ ನಡೆದಿದೆ ಎಂದರು.

ದೇಶದಲ್ಲಿ ಕರ್ನಾಟಕ ನಂ-1 ಮಾಡುವ ಗುರಿ :ನಮ್ಮ ಸರ್ಕಾರ ಬಂದು 1 ತಿಂಗಳೊಳಗೆ ಐದು ಗ್ಯಾರಂಟಿಗಳನ್ನು ಯೋಜನೆ ಜಾರಿಗೆ ತಂದಿದ್ದೇವೆ. ಈ ಯೋಜನೆಗಳಿಗೆ ವಾರ್ಷಿಕ 50 ಸಾವಿರ ಕೋಟಿ ರೂ. ಹೊರೆಯಾದರು ಸಹ ಜನರ ಜೀವನ ಸುಧಾರಣೆ ಮತ್ತು ಕಲ್ಯಾಣದ ನಿಟ್ಟಿನಲ್ಲಿ ಜಾರಿಗೆ ತರಲಾಗುತ್ತಿದೆ. ಈ ಆರ್ಥಿಕ ಹೊರೆಯನ್ನು ನಿಭಾಯಿಸುವ ಶಕ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ ಅವರಿಗಿದ್ದು, ಈಗಾಗಲೇ ಈ ಯೋಜನೆಗಳ ಜಾರಿಗೆ ಬೇಕಾಗುವ ಹಣಕಾಸು ಹೊಂದಾಣಿಕೆಗೆ ಪರ್ಯಾಯ ಮಾರ್ಗ ಕೂಡಾ ಕಂಡುಹಿಡಿಯಲಾಗಿದೆ. ಒಟ್ಟಾರೆ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತರುವ ಮೂಲಕ ದೇಶದಲ್ಲಿಯೇ ಕರ್ನಾಟಕ ನಂ-1 ರಾಜ್ಯ ಮಾಡುವ ಗುರಿ ಹೊಂದಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಆಶಯ ವ್ಯಕ್ತಪಡಿಸಿದರು.

ಕಂಡಕ್ಟರ್ ಸ್ಟೈಲ್​ನಲ್ಲಿ ಟಿಕೆಟ್​ ಕೊಟ್ಟ ಪ್ರಿಯಾಂಕ್ ಖರ್ಗೆ :ಶಕ್ತಿ ಯೋಜನೆಗೆ ಚಾಲನೆ ನೀಡಿದ ನಂತರ ಪ್ರಿಯಾಂಕ್ ಖರ್ಗೆ ಹೂವು ಮತ್ತು ಬಲೂನ್‍ಗಳಿಂದ ಅಲಂಕೃತಗೊಂಡ ಕಲಬುರಗಿ-ಆಳಂದ, ಕಲಬುರಗಿ-ಸೇಡಂ ಮಾರ್ಗದ ಬಸ್ ಹತ್ತಿದರು. ಕಂಡಕ್ಟರ್ ಬಳಿ ಇದ್ದ ಇಟಿಎಂ ಮಶೀನ್ ಪಡೆದು ತಾವೇ ಖುದ್ದಾಗಿ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ವಿತರಿಸಿದರು. ಇನ್ಮುಂದೆ ರಾಜ್ಯದಲ್ಲಿನ ಸಾರಿಗೆ ಬಸ್‍ಗಳಲ್ಲಿನ ಪ್ರಯಾಣಕ್ಕೆ ಮಹಿಳೆಯರು, ವಿದ್ಯಾರ್ಥಿನಿಯರು ಹಣ ಪಾವತಿಸಬೇಕಿಲ್ಲ. ಉಚಿತ ಟಿಕೆಟ್ ಪಡೆದು ಪ್ರಯಾಣಿಸಬಹುದು ಎಂದು ಹೇಳಿ ಪ್ರಯಾಣಕ್ಕೆ ಶುಭ ಕೋರಿದರು.

ಇದಕ್ಕು ಮುನ್ನ ಪ್ರಸ್ತಾವಿಕವಾಗಿ ಮಾತನಾಡಿದ ಕೆಕೆಆರ್​ಟಿಸಿ ಎಂಡಿ ಎಂ. ರಾಚಪ್ಪ, ಕೆಕೆಆರ್​ಟಿಸಿ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ನಗರ ಸಾರಿಗೆ 202, ಸಾಮಾನ್ಯ ಸಾರಿಗೆ 1533, ವೇಗದೂತ 1427, ಆಯ್ದ ಅಂತರ ರಾಜ್ಯ 216 ಸೇರಿದಂತೆ ಒಟ್ಟು 3378 ಬಸ್ಸುಗಳಿದ್ದು, ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಆಧಾರ್ ಕಾರ್ಡ್, ವೋಟರ್ ಐಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ನೀಡಿರುವ ವಾಸಸ್ಥಳದ ಗುರುತಿನ ಚೀಟಿ ತೋರಿಸಿ ಶೂನ್ಯ ಟಿಕೆಟ್ ಪಡೆದು ಉಚಿತ ಪ್ರಯಾಣ ಬೆಳೆಸಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತೀಮಾ, ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ವಿಶಾಲ ಧರ್ಗಿ, ಪಾಲಿಕೆ ಸದಸ್ಯರಾದ ವರ್ಷಾ ಜಾನೆ, ಸಚಿನ್ ಶಿರವಾಳ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಡಿ. ಬದೋಲೆ, ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್., ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಆಯುಕ್ತ ಆನಂದ ಪ್ರಕಾಶ ಮೀನಾ, ಕೆಕೆಆರ್​ಟಿಸಿ ಸಿಟಿಎಂ ಸಂತೋಷ, ವಿಭಾಗೀಯ ನಿಯಂತ್ರಣಾಧಿಕಾರಿ ಗಂಗಾಧರ, ಸಹಾಯಕ ಆಯುಕ್ತೆ ಮಮತಾ ಕುಮಾರಿ, ಮಾಜಿ ಮೇಯರ್ ಶರಣು ಮೋದಿ, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ :Congress Guarantee Scheme: ಮಹಿಳೆಯರಿಗೆ ಬಹುನಿರೀಕ್ಷಿತ ಉಚಿತ ಬಸ್​ ಪ್ರಯಾಣ .. ಇಲ್ಲಿದೆ ಶಕ್ತಿ ಯೋಜನೆಯ ಸಮಗ್ರ ಚಿತ್ರಣ

ABOUT THE AUTHOR

...view details