ಕಲಬುರಗಿ:ಅಫ್ಜಲಪುರ ಪಟ್ಟಣದಲ್ಲಿ ವೀರ ಸೇನಾನಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಅವಮಾನ ಮಾಡಿದ ಕಿಡಗೇಡಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸುವಂತೆ ಆಗ್ರಹಿಸಿ ಅಫ್ಜಲಪುರದಲ್ಲಿ ಕುರುಬ ಸಮುದಾಯ ಪ್ರತಿಭಟಿಸಿದೆ.
ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಅಪಮಾನ.. ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ..
ಸಂಗೊಳ್ಳಿ ರಾಯಣ್ಣನ ಭಾವಚಿತ್ರವಿರುವ ಬಾವುಟಕ್ಕೆ ಪಾದರಕ್ಷೆ ಹಾಕಿ ಅವಮಾನಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಕುರುಬ ಸಮುದಾಯ ತಹಶೀಲ್ದಾರರಿಗೆ ಮನವಿ ಸಲ್ಲಿಸಿದೆ.
ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಕುರುಬ ಸಮುದಾಯದ ಜನ, ತಹಶೀಲ್ದಾರ್ ಮಧುರಾಜ್ ಕೂಡಲಗಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಸಂಗೊಳ್ಳಿ ರಾಯಣ್ಣನ ಭಾವಚಿತ್ರದ ಬಾವುಟಕ್ಕೆ ಪಾದರಕ್ಷೆ ಹಾಕಿ ಅವಮಾನ ಮಾಡುವ ಮೂಲಕ ಕುರುಬ ಸಮಾಜದ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಇಂತಹ ಕೃತ್ಯಗಳು ಸಮಾಜದಲ್ಲಿ ಅಶಾಂತಿ, ಒಡಕು ಮೂಡಿಸುತ್ತಿವೆ. ಇದು ಸ್ವಾತಂತ್ರ್ಯ ಹೋರಾಟಗಾರನಿಗೆ ಮಾಡಿದ ಅವಮಾನ. ಇಂತಹ ಹೀನ ಕೃತ್ಯ ಮರುಕಳಿಸದಂತೆ ನೋಡಿಕೊಳ್ಳಬೇಕು. ಅವಮಾನ ಮಾಡಿದವರನ್ನು ಪತ್ತೆಹಚ್ಚಿ ಅವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸಮಾಜದ ಮುಖಂಡ ಜೆ ಎಂ ಕೊರಬು ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.