ಕಲಬುರಗಿ : ಕಲಬುರಗಿ ಮಹಾನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಚಿತ್ತಾಪೂರ ತಾಲೂಕಿನ ಹೊನಗುಂಟಾ ಗ್ರಾಮದ ಕಾಗಿಣಾ ನದಿಯಿಂದ ನೀರೆತ್ತಿ ಬೆಣ್ಣೆತೋರಾ ಜಲಾಶಯಕ್ಕೆ ತುಂಬಿಸುವ 365 ಕೋಟಿ ರೂ. ಮೊತ್ತದ ಯೋಜನಾ ವರದಿಗೆ ಸಂಪುಟ ಅಸ್ತು ಎಂದಿದೆ. ಮೊದಲ ಹಂತದ ಕಾಮಗಾರಿಗೆ ಟೆಂಡರ್ ಕರೆಯಲು ಒಪ್ಪಿಗೆ ಸೂಚಿಸಿದೆ ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಮುರುಗೇಶ್ ಆರ್. ನಿರಾಣಿ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ 74ನೇ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ವಿವಿಧ 11 ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.ಬಳಿಕ ಮಾತನಾಡಿದ ಅವರು, ಕಾಗಿಣಾ ನದಿಯ ಬಲದಂಡೆಯಲ್ಲಿ ಜಾಕ್ವೆಲ್-ಕಂ-ಪಂಪ್ ಹೌಸ್ ನಿರ್ಮಿಸಿ, 1.624 ಟಿಎಂಸಿ ನೀರನ್ನೆತ್ತಿ ಬೆಣ್ಣೆತೋರಾ ಜಲಾಶಯಕ್ಕೆ ತುಂಬಿಸುವ ಯೋಜನಾ ವರದಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆ ಎರಡು ಹಂತಗಳಲ್ಲಿ ಅಂದರೆ 1ನೇ ಹಂತದಲ್ಲಿ 88.69 ಕೋಟಿ ರೂ. ಹಾಗೂ 2ನೇ ಹಂತದಲ್ಲಿ 276.31 ಕೋಟಿ ರೂ.ಗಳಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.
ಏತ ನೀರಾವರಿ ಯೋಜನೆಗೆ ಅನುಮೋದನೆ :ಚಿಂಚೋಳಿ ತಾಲೂಕಿನ ಐನಾಪುರ ಮತ್ತು ಇತರ17 ಗ್ರಾಮಗಳ ಸುಮಾರು 3,710 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಎರಡು ಹಂತಗಳ ಯೋಜನೆಯ ಒಟ್ಟು 204.10 ಕೋಟಿ ರೂ. ಮೊತ್ತದ ಐನಾಪೂರ ಏತ ನೀರಾವರಿ ಯೋಜನೆಯ ವಿವರವಾದ ಯೋಜನಾ ವರದಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಮೊದಲನೇ ಹಂತದ 125.25 ಕೋಟಿ ರೂ. ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಮತ್ತು ಭೋರಿ ನದಿಯಿಂದ ಆಳಂದ ತಾಲೂಕಿನ 8 ಕೆರೆಗಳಿಗೆ ಪೈಪ್‍ಲೈನ್ ಮೂಲಕ ನೀರು ತುಂಬಿಸುವ 49.50 ಕೋಟಿ ರೂ. ಮೊತ್ತದ ವಿವರವಾದ ಯೋಜನಾ ಡಿ.ಪಿ.ಆರ್.ಗೂ ಸಹ ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಮೂಲಕ ಈ ಭಾಗದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಅಕಾಲಿಕ ಮಳೆ ಹಾಗೂ ತದನಂತರ ತಲೆದೋರಿದ ಒಣ, ಶುಷ್ಕ ವಾತಾವರಣದಿಂದ ಸಂಕೀರ್ಣ ನೆಟೆ ರೋಗದಿಂದ 2 ಲಕ್ಷಕ್ಕೂ ಹೆಚ್ಚಿನ ಹೆಕ್ಟೇರ್ ಪ್ರಮಾಣದಲ್ಲಿ ತೊಗರಿ ಬೆಳೆ ಹಾನಿಯಾಗಿದೆ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರ್ಕಾರವು ಈಗಾಗಲೇ ಪ್ರತಿ ಹೆಕ್ಟೇರಿಗೆ 10 ಸಾವಿರ ರೂ. ಗಳಂತೆ ಗರಿಷ್ಟ 2 ಹೆಕ್ಟೇರಿಗೆ ಸೀಮಿತಗೊಳಿಸಿ ಬಾಧಿತ ರೈತರಿಗೆ ಪರಿಹಾರ ಘೋಷಿಸಿದೆ. ಕಲಬುರಗಿ ಜಿಲ್ಲೆಯಲ್ಲಿಯೇ ಗರಿಷ್ಠ 1.98 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಅಂದಾಜು 223 ಕೋಟಿ ರೂ. ಈ ಮೂರು ಜಿಲ್ಲೆಗಳಿಗೆ ಪರಿಹಾರ ನೀಡಲಾಗುತ್ತಿದೆ ಎಂದರು.
ಕಾಶಿ ಮಾದರಿಯಲ್ಲಿ ಗಾಣಗಾಪುರ ಕಂಗೊಳಿಸಲಿದೆ: ಕಾಶಿ ವಿಶ್ವನಾಥ ಮತ್ತು ಉಜ್ಜೈನಿಯ ಕಾಳ ಹಸ್ತಿ ಮಾದರಿಯಲ್ಲಿ ಅಫಜಲಪುರ ತಾಲೂಕಿನ ಶ್ರೀ ದತ್ತಾತ್ರೇಯನ ಕ್ಷೇತ್ರವಾದ ಗಾಣಗಾಪೂರ ಸಮಗ್ರ ಅಭಿವೃದ್ಧಿಪಡಿಸಲಾಗುವುದು. ಪ್ರಸಕ್ತ ಸಾಲಿಗೆ 5 ಕೋಟಿ ರೂ. ನೀಡಲಾಗಿದೆ. ಜಿಲ್ಲಾಡಳಿತ ದತ್ತನ ಕ್ಷೇತ್ರದ ಅಭಿವೃದ್ಧಿಗೆ 67 ಕೋಟಿ ರೂ. ವೆಚ್ಚದ ಡಿ.ಪಿ.ಆರ್. ಸಿದ್ದಪಡಿಸಿದೆ. ಬರುವ ಆಯವ್ಯಯದಲ್ಲಿ ಇದನ್ನು ಘೋಷಿಸಿ ಅನುಷ್ಠಾನಕ್ಕೆ ತರುವ ಮೂಲಕ ಕ್ಷೇತ್ರವನ್ನು ಪ್ರಮುಖ ಯಾತ್ರಿಕ ಕೇಂದ್ರವನ್ನಾಗಿಸಿ ಅಭಿವೃದ್ಧಿಪಡಿಸಲಾಗುವುದು. ವಿಶೇಷವಾಗಿ ದೇವಸ್ಥಾನ ಹಾಗೂ ಭೀಮಾ ನದಿ ತೀರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ತಿಳಿಸಿದರು.
ಪರೇಡ್ ಕಮಾಂಡರ್ ಕಲಬುರಗಿ ನಗರ ಸಿ.ಎ.ಆರ್ ಆರ್.ಪಿ.ಐ ಶಿವಕುಮಾರ್ ಮುದ್ದಾ ಮತ್ತು ಸಹಾಯಕ ಪರೇಡ್ ಕಮಾಂಡರ್ ಕಲಬುರಗಿ ಡಿ.ಎ.ಆರ್ ಆರ್.ಎಸ್.ಐ. ಗುರುಬಸವ ಆರ್ ಅವರ ನೇತೃತ್ವದ 11 ತುಕಡಿಗಳ ಶಿಸ್ತುಬದ್ಧ ಪಥಸಂಚಲನ ಮತ್ತು ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ಸನ್ಮಾನ, ಲ್ಯಾಪಟಾಪ್ ವಿತರಣೆ: ಇದೇ ಸಂದರ್ಭದಲ್ಲಿ 2022ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಕು.ಸ್ಮಿತಾ, ಕು.ಶರಣಮ್ಮ, ಕು.ಭಾಗ್ಯಶ್ರೀ ಹಾಗೂ ಕು.ಪ್ರಿಯಾ ಅವರಿಗೆ ಶಿಕ್ಷಣ ಇಲಾಖೆಯಿಂದ ಪ್ರೋತ್ಸಾಹದಾಯಕವಾಗಿ ಲ್ಯಾಪ್ ಟಾಪ್ ವಿತರಿಸಲಾಯಿತು. ಎ.ಬಿ.ಆರ್.ಕೆ. ನೋಂದಣಿ ಪ್ರಕ್ರಿಯೆಯಲ್ಲಿ ಉತ್ತಮ ಸಾಧನೆಗೈದ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದ ಡಾ.ಅಂಬರೀಶ್ ಹಾಗೂ ಕಲಬುರಗಿಯ ವಿ.ಆರ್.ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಡಾ.ರವೀಂದ್ರ ಪಾಟೀಲ ಮತ್ತು ಗ್ರಾಮ ಒನ್ ಸೇವಾ ಕೇಂದ್ರದ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿರುವ ಚಂದ್ರಶೇಖರ ಅಣ್ಣಾರಾಯ ಬಿರಾದಾರ, ಗುರುನಾಥ ಹತ್ತಿ, ಸತೀಷ್ ಶಿವಾನಂದ ತೀರ್ಥೆ, ಸಂಗಣ್ಣ ಹಾಗೂ ವಿಶೇಷವಾಗಿ ನಿವೃತ್ತ ಹೆಡ್ ಕಾನ್ಸಟೇಬಲ್ ಖಾಜಾ ಫರಿದುದ್ದಿನ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಇದನ್ನೂ ಓದಿ :'ಏಕತೆ ಸಾರುವ ದೇಶ ಭಾರತ': ಶಿವಮೊಗ್ಗದಲ್ಲಿ ಸಚಿವ ನಾರಾಯಣ ಗೌಡ ಧ್ವಜಾರೋಹಣ