ಕಲಬುರಗಿ :ವಿಚ್ಚೇದನ ಕೋರಿ ನ್ಯಾಯಾಲಯಕ್ಕೆ ಬಂದ್ರೆ ಏನಾಗುತ್ತೆ ಹೇಳಿ? ಸತಿ ಪತಿ ದೂರವಾಗ್ತಾರೆ, ಇಬ್ಬರ ನಡುವಿನ ಸಂಬಂಧವನ್ನು ನ್ಯಾಯಾಲಯ ಕಡಿದು ಹಾಕುತ್ತೆ, ಆದ್ರೆ ಹೀಗೆ ಮಾಡುವ ಬದಲು ನ್ಯಾಯಾಲಯ ವಿಭಿನ್ನ ಕೆಲಸವೊಂದನ್ನು ಮಾಡಿದೆ.
ವಿಚ್ಚೇದನ ಬದಲಾಗಿ ಎರಡು ಜೋಡಿಗಳಿಗೆ ಮರು ಮದುವೆ ಮಾಡಿಸಿ ನ್ಯಾಯಾಲಯ ಹೊಸ ಜೀವನದ ಬೆಸುಗೆ ಬೆಸೆದಿದೆ. ಇಂತಹದೊಂದು ಅಪರೂಪದ ಶುಭಕಾರ್ಯಕ್ಕೆ ಸಾಕ್ಷಿಯಾಗಿದ್ದು ಕಲಬುರಗಿ ನ್ಯಾಯ ದೇಗುಲ.
ಘಟನೆ ವಿವರ:
ಕಲಬುರಗಿ ಗುರುರಾಜ ಧುಮಲೆ ಎಂಬುವರು ತಮ್ಮ ಪತ್ನಿ ಅಶ್ವಿನಿಯೊಂದಿಗಿನ ಸಂಸಾರಕ್ಕೆ ಗುಡ್ ಬೈ ಹೇಳುವ ಕಾರಣಕ್ಕಾಗಿ ವಿಚ್ಛೇದನ ಕೋರಿ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು ಹಾಗೂ ಮತ್ತೊಂದು ಜೋಡಿಯಾದ ಕೂಲಿ ಕೆಲಸ ಮಾಡುವ ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಶಂಕರ ಅಂತರಗಂಗಿ, ಭೂಪಾಲ ತೆಗನೂರ ಗ್ರಾಮದ ದ್ರೌಪತಿ ಅವರೊಂದಿಗೆ ವಿವಾಹವಾಗಿ 11 ವರ್ಷದ ನಂತರ ಕೌಟುಂಬಿಕ ಕಲಹ ಕಾರಣದಿಂದ ವಿಚ್ಛೇದನ ಕೋರಿ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಎರಡು ಪ್ರಕರಣಗಳನ್ನು ಲೋಕ ಅದಾಲತ್‍ನಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ನೇತೃತ್ವದ, ನ್ಯಾಯಮೂರ್ತಿ ಅಶೋಕ ಜಿ. ನಿಜಗಣ್ಣನವರ್, ನ್ಯಾಯಮೂರ್ತಿ ಶ್ಯಾಮ್ ಪ್ರಸಾದ್ ಒಳಗೊಂಡ ಪೀಠ, ಸತಿ-ಪತಿಗಳಿಗೆ ಒಂದಾಗಿ ಸಂಸಾರ ನಡೆಸುಂತೆ ಬುದ್ದಿವಾದ ಹೇಳಿದರು.
ನ್ಯಾಯಾಧೀಶರುಗಳ ಬುದ್ದಿ ಮಾತಿಗೆ ಸಹಮತ ವ್ಯಕ್ತಪಡಿಸಿದ ಜೋಡಿಗಳು ಸಂತೋಷದಿಂದಲೇ ನ್ಯಾಯಾಧೀಶರ ಸಮಕ್ಷಮ ಪರಸ್ಪರ ಹೂಮಾಲೆ ಬದಲಾಯಿಸಿಕೊಂಡು ಮತ್ತೇ ಹೊಸ ಜೀವನಕ್ಕೆ ಕಾಲಿಟ್ಟರು.
ನ್ಯಾಯಮೂರ್ತಿಗಳ ಹಾರೈಕೆ:
ನ್ಯಾಯಾಲಯದಲ್ಲಿ ಜೋಡಿಗಳು ಬೇರ್ಪಡುವುದು ಸಾಮಾನ್ಯ, ಅದಕ್ಕೆ ತದ್ವಿರುದ್ಧವಾಗಿ ಎರಡು ಜೋಡಿಗಳು ನ್ಯಾಯಾಲಯದಲ್ಲಿ ಸಂತೋಷದಿಂದ ಒಂದಾಗಿವೆ. ಪರಸ್ಪರ ಸಂಸಾರ ಮಾಡುವುದಾಗಿ ಒಪ್ಪಿಕೊಂಡಿವೆ.
ಇನ್ನು ಮುಂದೆ ಯಾವುದೇ ಕಾರಣಕ್ಕೂ ಬೇರೆಯಾಗುವ ವಿಚಾರಗಳು ಮೂಡಬಾರದು. ಯಾವುದೇ ಸಮಸ್ಯೆಗಳಿದ್ದರೂ ಪರಸ್ಪರ ಮಾತುಕತೆಯಿಂದ ಬಗೆಹರಿಸಿಕೊಳ್ಳಬೇಕು. ನಿಮ್ಮ ಮಕ್ಕಳಿಗೋಸ್ಕರವಾದರೂ ಒಟ್ಟಾಗಿ ಬದುಕು ಸಾಗಿಸಿ ಎಂದು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ, ಮರು ವಿವಾಹಿತ ಜೋಡಿಗಳಿಗೆ ಬುದ್ದಿವಾದ ಹೇಳಿ ಸುಂದರ ಬದುಕು ನಿಮ್ಮದಾಗಲಿ ಎಂದು ಶುಭಹಾರೈಸಿ ಸಿಹಿ ನೀಡಿದ್ದಾರೆ.
ಒಂದಾದ ಅಪ್ಪ ಅಮ್ಮನಿಗೆ ಸಿಹಿ ತಿನ್ನಿಸಿದ ಮಗ:
ಕೂಲಿ ಕೆಲಸ ಮಾಡುವ ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಶಂಕರ ಅಂತರಗಂಗಿ, ಭೂಪಾಲ ತೆಗನೂರ ಗ್ರಾಮದ ದ್ರೌಪತಿ ಅವರೊಂದಿಗೆ ವಿವಾಹವಾಗಿ 11 ವರ್ಷದ ನಂತರ ಕೌಟುಂಬಿಕ ಕಲಹ ಕಾರಣದಿಂದ ವಿಚ್ಛೇದನ ಕೋರಿ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕುಟುಂಬ ನ್ಯಾಯಲಯಶಂಕರ ಅಂತರಗಂಗಿಪರ ತೀರ್ಪು ನೀಡಿತ್ತು. ಸ್ಥಳೀಯ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಪತ್ನಿ ದ್ರೌಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇವರ 9 ವರ್ಷದ ವೈವಾಹಿಕ ಜೀವನಕ್ಕೆ ಇಬ್ಬರು ಮಕ್ಕಳಿದ್ದಾರೆ. ಮೆಗಾ ಅದಾಲತ್‍ನಲ್ಲಿ ತಂದೆ-ತಾಯಿ ಒಂದಾಗಿದ್ದಕ್ಕೆ ಮಗ ಶರಣು ಹೆತ್ತವರಿಗೆ ಸಿಹಿ ತಿನ್ನಿಸುತ್ತಿದ್ದಂತೆ ನ್ಯಾಯಾಲಯದಲ್ಲಿ ಚಪ್ಪಾಳೆಯ ಸುರಿಮಳೆ ಕಂಡುಬಂತು.
ಒಟ್ಟಾರೆ ಸತಿ-ಪತಿ ದೂರವಾಗಿ ಅನಾಥವಾಗುತ್ತಿದ್ದ ಮಕ್ಕಳ ಪಾಲಿಗೆ ಮೇಗಾ ಅದಾಲತ್ ಮೂಲಕ ದೇವರಾಗಿ ಬಂದ ನ್ಯಾಯಮೂರ್ತಿಗಳು ಸತಿಪತಿಗಳಿಗೆ ಹೊಸ ಜೀವನ ಕಟ್ಟಿಕೊಡುವ ಮೂಲಕ ಮಕ್ಕಳಿಗೆ ತಂದೆ - ತಾಯಿ ಪ್ರೀತಿ ಮರಳಿ ಸಿಗುವಂತೆ ಮಾಡಿದ್ದಾರೆ.