ಕಲಬುರಗಿ: ಎಸ್.ಎಲ್.ಎಲ್.ಸಿ. ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳಕ್ಕೆ ನಡೆಸಲಾಗುತ್ತಿರುವ “ತೀವ್ರ ನಿಗಾ ಕಲಿಕಾ ತರಬೇತಿ” ಕೇಂದ್ರಗಳಿಗೆ ಕೆ.ಕೆ.ಆರ್.ಡಿ.ಬಿ. ಮಂಡಳಿ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಆಯುಕ್ತರಾದ ಸುಬೋಧ್ ಯಾದವ್ ದಿಢೀರ ಭೇಟಿ ನೀಡಿದರು.
ಸತತ ಐದು ವರ್ಷಗಳಿಂದ ಶೇಕಡಾ ಕಡಿಮೆ ಫಲಿತಾಂಶ ಹೊಂದಿರುವ ಶಾಲೆ ಹಾಗೂ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿ ನವೆಂಬರ್ ತಿಂಗಳಿನಿಂದ “ತೀವ್ರ ನಿಗಾ ಕಲಿಕಾ ತರಬೇತಿ” ಕೇಂದ್ರ ಸ್ಥಾಪನೆ ಮಾಡಲಾಗಿದೆ.
ಕಲಬುರಗಿ ತಾಲೂಕಿನ ಫರಹತಾಬಾದ್, ಹೊನ್ನಕಿರಣಗಿ ಹಾಗೂ ಉದನೂರ ಗ್ರಾಮ ಪ್ರೌಢಶಾಲೆಗಳಲ್ಲಿ ನಡೆಸಲಾಗುತ್ತಿರುವ ತೀವ್ರ ನಿಗಾ ಕಲಿಕಾ ತರಬೇತಿ ಕೇಂದ್ರಗಳಿಗೆ ದಿಢೀರ ಭೇಟಿ ನೀಡಿದ ಪ್ರಾದೇಶಿಕ ಆಯುಕ್ತರು, ಮಕ್ಕಳೊಂದಿಗೆ ಸಂವಾದ ನಡೆಸಿದರು.
ಎಸ್ಎಸ್ಎಲ್ಸಿ ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಿದ ಪ್ರಾದೇಶಿಕ ಆಯುಕ್ತರು ನಿತ್ಯ ಬೆಳಿಗ್ಗೆ ಹಾಗೂ ಸಂಜೆ ತರಬೇತಿ ನಡೆಯುವ ಬಗ್ಗೆ ಹಾಗೂ ತರಬೇತಿ ನಂತರ ಸಾಯಂಕಾಲ ಮಕ್ಕಳು ತಮ್ಮ ಊರುಗಳಿಗೆ ತೆರಳಲು ಬಸ್ಸಿನ ವ್ಯವಸ್ಥೆ ಬಗ್ಗೆ ಆಯಾ ಶಾಲೆಯ ಪ್ರಾಂಶುಪಾಲರಿಂದ ಮಾಹಿತಿ ಪಡೆದರು.
ಇನ್ನು ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಳಿನ್ ಅತುಲ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು