ಕಲಬುರಗಿ: ನಾಗಾಲೋಟದಲ್ಲಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ನೀರಿನ ಅಭಾವ ಹೆಚ್ಚಾಗಿ ಕಾಡುತ್ತಿದೆ. ಅದರಲ್ಲೂ ಬೇಸಿಗೆ ಬಂತೆಂದರೆ ಇರುವ ನೀರನ್ನು ಸಮರ್ಪಕವಾಗಿ ಬಳಸುವುದು ಒಂದು ದೊಡ್ಡ ಸವಾಲೇ ಸರಿ. ಅದರಂತೆ ಚರಂಡಿ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವ ಪ್ರಯತ್ನದಲ್ಲಿ ಕಲಬುರಗಿ ಜಿಲ್ಲೆಯ ಪಾತ್ರ ಹೇಗಿದೆ ಎಂಬ ಸಮಗ್ರ ಮಾಹಿತಿ ಇಲ್ಲಿದೆ.
ನೀರನ್ನು ಶುದ್ಧೀಕರಿಸಿ ಮರು ಬಳಕೆ:
ರಾಜ್ಯದಲ್ಲಿ ಕಸದ ಸಮಸ್ಯೆಯಂತೆಯೇ ಚರಂಡಿ ನೀರಿನ ಸಮಸ್ಯೆಯೂ ಇದೆ. ಕೆಲವು ಪ್ರದೇಶಗಳಲ್ಲಂತೂ ನದಿಗಳಿಗೆ ಚರಂಡಿ ನೀರನ್ನು ಹರಿಬಿಟ್ಟು ಸಾಕಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗಿರೋ ಉದಾಹರಣೆಗಳಿವೆ. ಆದ್ರೆ ಕಲಬುರಗಿ ಜಿಲ್ಲೆಯಲ್ಲಿ ಮಾತ್ರ ಇಂತಹ ಯಾವುದೇ ಸಮಸ್ಯೆ ಇಲ್ಲ. ಯಾಕೆಂದ್ರೆ, ಇಲ್ಲಿ ಚರಂಡಿ ನೀರನ್ನು ಶುದ್ಧೀಕರಿಸಿ ಮರು ಬಳಕೆ ಮಾಡಲಾಗುತ್ತಿದೆ.
ಚರಂಡಿ ನೀರು ಶುದ್ಧೀಕರಿಸಿ ಮರುಬಳಕೆ: ರೈತರಿಗೆ ಅನುಕೂಲ ಕಲಬುರಗಿ ಜಿಲ್ಲೆಯಲ್ಲೂ ಇತ್ತು ಸಮಸ್ಯೆ:
ಜನಸಂಖ್ಯೆ ಬೆಳೆದಂತೆ ರಾಜ್ಯದ ಹಲವೆಡೆ ಉಂಟಾಗಿರುವ ಸಮಸ್ಯೆಯಂತೆ ಇಲ್ಲಿಯೂ ಚರಂಡಿ ನೀರಿನ ಸಮಸ್ಯೆ ಸಾಕಷ್ಟಿತ್ತು. ನಗರದಲ್ಲಿ ವೇಸ್ಟ್ ವಾಟರ್ ಹೆಚ್ಚಾದರಿಂದ ಅದನ್ನು ಸಂಗ್ರಹ ಮಾಡಲು ಸ್ಥಳಾವಕಾಶ ಇರಲಿಲ್ಲ. ಅಲ್ಲದೇ ಚರಂಡಿ ನೀರು ಅಲ್ಲಲ್ಲಿ ಸಂಗ್ರಹವಾಗಿ ಸಾಕಷ್ಟು ಸಾಂಕ್ರಾಮಿಕ ರೋಗಗಳಿಗೆ ಜನರು ತುತ್ತಾಗುತ್ತಿದ್ದರು. ಜೊತೆಗೆ ಅಂತರ್ಜಲ ಸಹ ಕಲುಶಿತಗೊಳ್ಳುತ್ತಿತ್ತು.
ಚರಂಡಿ ನೀರು ಶುದ್ಧೀಕರಣ ಘಟಕ:
ಈ ಕುರಿತು ಸಾರ್ವಜನಿಕರು ಹೋರಾಟ ನಡೆಸಿದಾಗ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ ಚರಂಡಿ ನೀರನ್ನೇ ಶುದ್ಧೀಕರಿಸುವ ಯೋಜನೆ ರೂಪಿಸಿ ಯಶಸ್ವಿಯಾಗಿದೆ. ನಂದಿಕೂರ ಬಳಿಯ ಚರಂಡಿ ನೀರು ಶುದ್ಧೀಕರಣ ಘಟಕದಲ್ಲಿ ನಿತ್ಯ 55 ಎಂಎಲ್‌ಡಿ ಚರಂಡಿ ನೀರನ್ನು ಶುದ್ಧೀಕರಿಸಲಾಗುತ್ತಿದೆ. ಶುದ್ಧೀಕರಿಸಿದ ನೀರನ್ನು ರೈತರ ಹೊಲಗಳಿಗೆ ಕೊಡುವ ಯೋಜನೆ ರೂಪಿಸಿ ಚರಂಡಿ ನೀರು ಕೂಡಾ ಸದುಪಯೋಗಗೊಳ್ಳುವಂತೆ ಮಾಡಲಾಗಿದೆ. ಇದರಿಂದ ನಮಗೆ ಸಾಕಷ್ಟು ಅನುಕೂಲ ಆಗಿದೆ ಎನ್ನುವ ಅಭಿಪ್ರಾಯ ಇಲ್ಲಿನ ರೈತರದ್ದಾಗಿದೆ.
ನಂದಿಕೂರು-ಕಪನೂರ ಬಳಿ ಘಟಕ:
ಚರಂಡಿ ನೀರು ಶುದ್ಧೀಕರಣಕ್ಕಾಗಿ ಕಲಬುರಗಿ ತಾಲೂಕಿನ ನಂದಿಕೂರು ಬಳಿ 40 ಹಾಗೂ 20 ಎಂಎಲ್‌ಡಿ ಸಾಮರ್ಥ್ಯದ ಎರಡು ಘಟಕ ಹಾಗೂ ಕಪನೂರ ಬಳಿ 25 ಎಂಎಲ್‌ಡಿ ಸಾಮರ್ಥ್ಯದ ಒಂದು ಘಟಕವಿದೆ. ನಿತ್ಯ 85 ಎಂಎಲ್‌ಡಿ ನೀರು ಶುದ್ಧೀಕರಣ ಮಾಡುವ ಸಾಮರ್ಥ್ಯ ಈ ಘಟಕಗಳಿಗಿವೆ. ಆದರೆ ಸದ್ಯ ಕಲಬುರಗಿ ನಗರದಲ್ಲಿ ಪ್ರತಿನಿತ್ಯ 62 ಎಂಎಲ್‌ಡಿ ಚರಂಡಿ ನೀರು ಮಾತ್ರ ಉತ್ಪತ್ತಿಯಾಗುತ್ತಿದೆ. ಹೀಗಾಗಿ ಚರಂಡಿ ನೀರಿನ ಸಮಸ್ಯೆ ತೆಲೆದೋರುತ್ತಿಲ್ಲ.
ಕೃಷಿ ಚಟುವಟಿಕೆಗಳಿಗೆ ತಲುಪುತ್ತಿದೆ ಈ ನೀರು:
25 ಎಂಎಲ್‌ಡಿ ಸಾಮರ್ಥ್ಯದ ಕಪನೂರ ಘಟಕಕ್ಕೆ ನಿತ್ಯ 7 ಎಂಎಲ್‌ಡಿ ಮತ್ತು 60 ಎಂಎಲ್‌ಡಿ ಸಾಮರ್ಥ್ಯದ ನಂದಿಕೂರ ಘಟಕಗಳಿಗೆ 55 ಎಂಎಲ್‌ಡಿ ಚರಂಡಿ ನೀರು ಹರಿದುಬರುತ್ತಿದೆ. ಶುದ್ಧೀಕರಿಸಿದ ನೀರನ್ನು ಭೀಮಾ ನದಿಗೆ ಹರಿಯಬಿಡಲಾಗುತ್ತಿತ್ತು. ಇದೀಗ ಇದೇ ನೀರನ್ನು ಕೃಷಿ ಚಟುವಟಿಕೆಗಳಿಗೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಕೊರತೆ ಕಂಡುಬಂದರೆ ನೀರನ್ನು ಶುದ್ಧೀಕರಿಸಿ ಮರು ಬಳಕೆ ಮಾಡುವ ಯೋಜನೆ ಹೊಂದಿದ್ದೇವೆಂದು ಪಾಲಿಕೆ ಆಯುಕ್ತ ಲೊಕಂಡೆ ಸ್ನೇಹಲ್ ಸುಧಾಕರ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ಪಟ್ಟು ಸಡಿಲಿಸದ ಪಂಚಮಸಾಲಿಗಳು: ಇಂದು ಸಂಜೆ ದುಂಡು ಮೇಜಿನ ಸಭೆ
ಆಶಾದಾಯಕ ಬೆಳವಣಿಗೆ ಎನ್ನುವಂತೆ ಚರಂಡಿ ನೀರಿನ ಸಮಸ್ಯೆಗೆ ಕಲಬುರಗಿ ಮಹಾನಗರ ಪಾಲಿಕೆ ಮುಕ್ತಿ ಕೊಟ್ಟಿದೆ. ಇದರಿಂದ ರೈತರಿಗೂ ಅನುಕೂಲ ಆಗಿದೆ. ಒಟ್ಟಾರೆ ಮಹಾನಗರ ಪಾಲಿಕೆಯ ಚರಂಡಿ ನೀರು ಮರುಬಳಕೆ ಪ್ಲಾನ್ನಿಂದ ಸಾಕಷ್ಟು ಅನುಕೂಲ ಆಗಿದ್ದು ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.